ಕೋಲಾರ : ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ನಮ್ದು ಸ್ಟೇಬಲ್ ಕಾನ್ಫಿಡೆಂಟ್. ಓವರ್ ಇಲ್ಲ, ಲೆಸ್ ಇಲ್ಲ ಎಂದು ಬಿಜೆಪಿ ಅಭ್ಯರ್ಥಿಗಳಿಗೆ ಕೋಲಾರ ಸಂಸದ ಕೆ.ಹೆಚ್.ಮುನಿಯಪ್ಪ ಟಾಂಗ್ ನೀಡಿದ್ದಾರೆ.
ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೋಲಾರ ಸೇರಿದಂತೆ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದೆ ಬಿಟ್ಟಿರುವವರಂತೆ ನಡೆದುಕೊಳ್ಳುತ್ತಿದ್ದರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಈ ಹಿಂದೆ ಕೂಡ ಅಭ್ಯರ್ಥಿಗಳು ಹೀಗೆ ಗೆದ್ದೆ ಬಿಟ್ಟಿದ್ದೇವೆ ಎಂದು ಓಡಾಡಿದ್ದರು. 2004ರಲ್ಲಿ ಬಿಜೆಪಿ ಅಭ್ಯರ್ಥಿ ವೀರಯ್ಯ ಹೀಗೆ ಓಡಾಡಿದ್ದರು ಗೊತ್ತಿಲ್ವಾ ನಿಮಗೆ ಎಂದು ಮಾಧ್ಯಮದವರಿಗೆ ಪ್ರಶ್ನೆ ಮಾಡಿದರು.
ಸೋಲು ಗೆಲುವುಗಳ ಕುರಿತು ಮಾತನಾಡುವವರು ಶೇ. 10ರಷ್ಟು ಮಾತ್ರ. ನಗರ ಪ್ರದೇಶಗಳಲ್ಲಿ ಮಾತನಾಡುತ್ತಾರೆ. ಆದ್ರೆ ಕೆಲಸ ಮಾಡಿರುವವರು ಶೇ. 90ರಷ್ಟಿದ್ದಾರೆ. ಕೆಲಸ ಮಾಡಿರುವವರು ಹಳ್ಳಿಗಳಲ್ಲೆ ಇದ್ದಾರೆ. ಹಾಗಾಗಿ ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ಇನ್ನು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದವರ ವಿರುದ್ಧ ಕೆಲಸ ಆರಂಭವಾಗಿದೆ. ಪಕ್ಷ ವಿರೋಧಿ ಕೆಲಸ ಮಾಡಿದವರ ವಿರುದ್ಧ ಪ್ರದೇಶ ಕಾಂಗ್ರೆಸ್ ಸಮಿತಿ ಕ್ರಮ ಕೈಗೊಳ್ಳಲಿದೆ. ಕಾಂಗ್ರೆಸ್‍ನಲ್ಲಿ ಶಾಸಕರು, ಸಂಸದರು ಯಾರೂ ದೊಡ್ಡವರಲ್ಲ ಎಂದರು.
ಮಾಜಿ ಸಿಎಂ ಯಡಿಯೂರಪ್ಪ ಕೋಲಾರ ಸೇರಿದಂತೆ ರಾಜ್ಯದಲ್ಲಿ 21 ಸ್ಥಾನಗಳನ್ನ ಗೆಲ್ಲಲಿದ್ದೇವೆ ಎಂಬ ಹೇಳಿಕೆಗೆ ಗರಂ ಆದ ಮುನಿಯಪ್ಪ, ಬಿಜೆಪಿಯವರ ಕಥೆ ನನಗೆ ಗೊತ್ತಿಲ್ಲ. ನಾನು ಹೇಳಿದ್ದನ್ನ ಬರೆಯಿರಿ. ನಾನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ. ನಾನು ಹೇಳ್ತಾ ಇದಿನಿ ಕಾಂಗ್ರೆಸ್ ಗೆಲ್ಲುತ್ತೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು.