ಕೋಲಾರ : ಸರ್ಕಾರಿ ವಸತಿ ಶಾಲೆಯಲ್ಲಿ ಆರ್ಎಸ್ಎಸ್ ನಿಂದ ಕೇಸರಿ ಕ್ಯಾಂಪ್ ಮಾಡುವ ಮೂಲಕ ಹೊಸ ವಿವಾದವೊಂದು ರಾಜ್ಯದಲ್ಲಿ ಕೇಳಿ ಬಂದಿದೆ. ಅದರಲ್ಲೂ ಕೇಸರಿ ಕ್ಯಾಂಪ್ ಮಾಡೋದಕ್ಕೆ ನೇರವಾಗಿ ಸಮಾಜ ಕಲ್ಯಾಣ ಸಚಿವರೇ ಅನುಮತಿ ನೀಡಿರೋದು ವಿರೋಧಕ್ಕೆ ಕಾರಣವಾಗಿದೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ಆರ್ಎಸ್ಎಸ್ ಕಾರ್ಯಕರ್ತರು ಹಾಗೂ ಮುಖಂಡರು ಮತ್ತೊಂದೆಡೆ ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವ ಎಸ್ಎಫ್ಐ ಮುಖಂಡರು, ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆಯಲ್ಲಿ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಕೂತಾಂಡ್ಲಹಳ್ಳಿ ಗ್ರಾಮದ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆರ್ಎಸ್ಎಸ್ ಪ್ರಶಿಕ್ಷಾ ವರ್ಗ ತರಬೇತಿ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ತರಬೇತಿ ಶಿಬಿರ ನಡೆಸಲು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರೇ ತಮ್ಮ ಲೆಟರ್ ಹೆಡ್ನಲ್ಲಿ ಅನುಮತಿ ನೀಡಿದ್ದಾರೆ.
ಬೇರೆ ಸಂಘಟನೆ ಹೆಸರಿನಲ್ಲಿ ಆರ್ಎಸ್ಎಸ್ಗೆ ಅವಕಾಶ : ಕೋಲಾರ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಶಿಕ್ಷಾ ವರ್ಗ ನಡೆಸಲು ಸಚಿವರು ಅನುಮತಿ ನೀಡಿರುವುದು ಕೆಲ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಕೋಲಾರದಲ್ಲಿ ಪ್ರೇರಣಾ ಪ್ರತಿಷ್ಠಾನದ ಹೆಸರಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ಷಯ ಸೇವಾ ಪ್ರತಿಷ್ಠಾನದ ಹೆಸರಲ್ಲಿ ಅನುಮತಿ ನೀಡಲಾಗಿದೆ. ಎಲ್ಲೂ ಕೂಡಾ ಆರ್ಎಸ್ಎಸ್ ಅನ್ನೋ ಪದ ಬಳಸಿಲ್ಲ, ಆದರೆ, ಒಳಗೆ ಮಾತ್ರ ಸಂಘ ಪರಿವಾರದ ಶಿಬಿರ ನಡೆಸಲಾಗುತ್ತಿದೆ.
ಅನುಮತಿ ಪಡೆಯುವ ಸಮಯದಲ್ಲೂ ಯುವಕರಿಗೆ ಹಾಗೂ ತರುಣರಿಗೆ ಒಂದು ವಾರಗಳ ಕಾಲ ಅಂದರೆ ಅಕ್ಟೊಬರ್-09 ರಿಂದ 16 ವರೆಗೆ ವ್ಯಕ್ತಿತ್ವ ವಿಕಸನ ಶಿಬಿರ ಆಯೋಜನೆ ಮಾಡಲಾಗುತ್ತಿದ್ದು ಶಿಬಿರದಲ್ಲಿ ಯೋಗಾಬ್ಯಾಸ, ರಾಷ್ಟ್ರೀಯ ಚಿಂತನೆ, ದೈಹಿಕ ಮತ್ತು ಬೌದ್ಧಿಕ ವ್ಯಕ್ತಿತ್ವ ವಿಕಸನ ಕುರಿತು ಕಾರ್ಯ ಚಟುವಟಿಕೆ ನಡೆಸುವುದಾಗಿ ಹೇಳಿದೆ.
ಸದ್ಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ದಸರೆ ರಜೆ ನೀಡಲಾಗಿದೆ. ಇನ್ನು ಶಿಬಿರದಲ್ಲಿ ಜಿಲ್ಲೆಯ ಹಾಗೂ ಬೇರೆ ಬೇರೆ ರಾಜ್ಯದಿಂದ ಬಂದಿರುವ ಸುಮಾರು ನೂರು ಜನ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ. ಇನ್ನು ಶಿಬಿರ ನಡೆಯುವ ಶಾಲೆಯ ಒಳಗಡೆ ಯಾರಿಗೂ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಸದ್ಯ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಕಟ್ಟಡದಲ್ಲಿ ಆರ್ಎಸ್ಎಸ್ ಕ್ಯಾಂಪ್ ನಡೆಸಿರುವುದಕ್ಕೆ ಎಸ್ಎಫ್ಐ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಆರ್ಎಸ್ಎಸ್ಗೆ ಅವಕಾಶ ಕೊಟ್ಟಿಲ್ಲ : ಈ ಬಗ್ಗೆ ಕಾರವಾರದಲ್ಲಿ ಪ್ರತಿಕ್ರಿಯೆ ನೀಡಿರುವ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸಪೂಜಾರಿ, ಶಿಬಿರ ನಡೆಸಲು ಆರ್ಎಸ್ಎಸ್ ಸಂಘಟನೆಗೆ ನಾವು ಅವಕಾಶ ಕೊಟ್ಟಿಲ್ಲ. ರಜೆ ಸಂದರ್ಭದಲ್ಲಿ ಎನ್ಎಸ್ಎಸ್ ಸೇರಿ ಎಲ್ಲರೂ ಅನುಮತಿ ಕೇಳುತ್ತಾರೆ. ಉತ್ತಮ ಸಂದೇಶ ಕೊಡುವ ಎಲ್ಲ ಸಂಸ್ಥೆಗೂ ಅನುಮತಿ ಕೊಡ್ತೇವೆ.
ನಿಷೇಧಿತ ಸಂಸ್ಥೆಗಳಿಗೆ ಶಿಬಿರ ನಡೆಸುವ ಅನುಮತಿ ನೀಡುವುದಿಲ್ಲ. ದೇಶ ಮೊದಲು ಅನ್ನೋ ಸಂಸ್ಥೆಗೆ ಶಿಬಿರ ನಡೆಸಲು ಅವಕಾಶ ಕೊಟ್ಟಿದ್ದೇವೆ. ಆರ್ಎಸ್ಎಸ್ಗೆ ನಾವು ಅವಕಾಶ ಕೊಟ್ಟಿಲ್ಲ. ಇದು ಸರಿಯೋ ತಪ್ಪೋ ಪ್ರಶ್ನೆ ಅಲ್ಲ, ಟೀಕೆ ಮಾಡುವವರು ಇದರ ಬಗ್ಗೆ ಮಾಹಿತಿ ಪಡೆದು ಟೀಕಿಸಲಿ ಎಂದಿದ್ದಾರೆ.
ಇದನ್ನೂ ಓದಿ : ಮಂತ್ರಾಲಯ ಮಠಕ್ಕೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ವೈ ಭೇಟಿ