ಕೋಲಾರ: ಈ ಬಾರಿ ಲೋಕಸಭಾ ಚುನಾವಣೆ ಜಿದ್ದಾಜಿದ್ದಿನ ಕಣವಾಗಿದ್ದು, ಸಾಕಷ್ಟು ರೋಚಕತೆ ಪಡೆದುಕೊಂಡಿದೆ. ಫಲಿತಾಂಶಕ್ಕೆ ಇನ್ನೂ ಒಂದು ತಿಂಗಳು ಕಾಯಬೇಕಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಅವರು ಲಕ್ಷಾಂತರ ರೂ ಬಾಜಿ ಕಟ್ಟಿ ದುಡ್ಡು ಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.
ಮತದಾರರು ಹಾಗೂ ಕೆಲ ಕಾರ್ಯಕರ್ತರು ತಮ್ಮ ತಮ್ಮ ಅಭ್ಯರ್ಥಿಗಳೇ ಗೆಲ್ತಾರೆ ಎಂದು ಭಾರೀ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ. ಕೋಲಾರದಲ್ಲಿ 7 ಬಾರಿ ಸಂದರಾಗಿರುವ ಕೆ.ಎಚ್.ಮುನಿಯಪ್ಪ ಅವರಾ ಅಥವಾ ಬಿಜೆಪಿಯ ಎಸ್.ಮುನಿಸ್ವಾಮಿನಾ ಎಂದು ಗೆಲುವಿನ ಬಗ್ಗೆ ಬೆಟ್ಟಿಂಗ್ ಜೋರಾಗಿದೆ.
ಕೆಲವರಂತೂ, ಅಭ್ಯರ್ಥಿಗಳ, ಪಕ್ಷಗಳ ಪರವಾಗಿ ಲಕ್ಷಾಂತರ ರೂಪಾಯಿ ನಗದು, ಚಿನ್ನ-ಬೆಳ್ಳಿ, ವಾಹನ, ನಿವೇಶನ, ಬೆಲೆ ಬಾಳುವ ಬೈಕ್, ಕಾರುಗಳ ಜೊತೆಗೆ ಜಮೀನುಗಳನ್ನೇ ಜೂಜಿನಲ್ಲಿಟ್ಟಿದ್ದಾರೆ. ಹಾಗಾಗಿ ಮತ ಎಣಿಕೆಯ ದಿನಕ್ಕಾಗಿ ಕುತೂಹಲ ತೀವ್ರವಾಗುತ್ತಿದೆ.