ಕೋಲಾರ: ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಕಣ ರಂಗೇರಿದ್ದು, ಈ ಬೆನ್ನಲ್ಲೇ ಅಪಹರಣ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಸದ್ಯದಲ್ಲೇ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಲಿದ್ದು, ಈಗಾಗಲೇ ಕೆಲವರು ರೆಸಾರ್ಟ್, ಪ್ರವಾಸ ಎಂದು ಹೋಗಿದ್ದಾರೆ. ಆದರೆ ಕೋಲಾರ ತಾಲೂಕಿನ ಹುತ್ತೂರು ಗ್ರಾಪಂ ವ್ಯಾಪ್ತಿಯಲ್ಲಿ ಇಬ್ಬರು ಪಂಚಾಯಿತಿ ಸದಸ್ಯರನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳಲಿ ಗ್ರಾಮದ ಸದಸ್ಯರಾದ ಮಂಜುಳ ಹಾಗೂ ಪಿಳ್ಳಮ್ಮ ನಾಪತ್ತೆಯಾಗಿದ್ದು, ಅಪಹರಣ ಮಾಡಿದ್ದಾರೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
ಜನವರಿ 20ರಂದು ಓಂಶಕ್ತಿ ದೇವಾಲಯಕ್ಕೆ ಹೋದವರು ವಾಪಸ್ ಬಂದಿಲ್ಲ. ಅದೇ ಗ್ರಾಮದ ಸುನಿಲ್ ಬಾಬು ಹಾಗೂ ವಿಜಯ್ ಕುಮಾರ್ ಎಂಬುವರು ಅಪಹರಣ ಮಾಡಿದ್ದಾರೆ ಎಂದು ಪಿಳ್ಳಮ್ಮ ಪತಿ ಗೋವಿಂದಪ್ಪ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.