ಕೋಲಾರ : ಕೆಜಿಎಫ್ ನಗರಸಭೆಗೆ ಎಸಿಬಿ ಅಧಿಕಾರಿಗಳು ಶಾಕ್ ನೀಡಿದ್ದು, ಸಂಜೆ ನಾಲ್ಕು ಗಂಟೆಗೆ ಕಚೇರಿ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ಇಡೀ ಸಭೆಯನ್ನು ಸುಪರ್ದಿಗೆ ಪಡೆದು ವಿಚಾರಣೆ ಆರಂಭಸಿದ್ದಾರೆ.
ಕೆಜಿಎಫ್ ನಗರಸಭೆ ಆಯುಕ್ತೆ ಸರ್ವರ್ ಮರ್ಚೆಂಟ್ ಸೇರಿ ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿಯನ್ನ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಕೋಲಾರದ ಕೆಜಿಎಫ್‌ನ ನಗರಸಭೆ ಮೇಲೆ ಮಾಸ್ ರೈಡ್ ಮಾಡಿರುವ ಎಸಿಬಿ, ನಗರಸಭೆಯಲ್ಲಿರುವ ಎಲ್ಲಾ ವಿಭಾಗಗಳ ಅಧಿಕಾರಿ ಮತ್ತು ಸಿಬ್ಬಂದಿಯನ್ನ ವಿಚಾರಣೆ ಮಾಡುತ್ತಿದ್ದಾರೆ. ಜೊತೆಗೆ ಪ್ರಮುಖ ಕಡತಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನಗಳಲ್ಲಿ ಭಾರೀ ಗೋಲ್‌ಮಾಲ್ ಸೇರಿ ಇತ್ತೀಚೆಗೆ ಮಾರುಕಟ್ಟೆ ಹರಾಜು ಪ್ರಕ್ರಿಯೆಯಲ್ಲಿ ಭಾರೀ ಹಣದ ವಹಿವಾಟು ನಡೆದಿರುವ ಕುರಿತು ಹಲವು ದೂರು ನಗರಸಭೆ ವಿರುದ್ಧ ಕೇಳಿ ಬಂದಿತ್ತು. ಈ ಬಗ್ಗೆ ಕೆಜಿಎಫ್ ಶಾಸಕಿ ರೂಪ ಕೂಡ ನಗರಸಭೆ ಮಾರುಕಟ್ಟೆಯಲ್ಲಿ ಸಾಕಷ್ಟು ಹಣದ ಹೊಳೆ ಹರಿದಿದೆ ಎಂದು ವಿಧಾನಸಭೆಯಲ್ಲಿ ಚರ್ಚೆ ಮಾಡಿದ್ರು.
ಓದಿ:ಮೀನಿನ ಹೊಟ್ಟೆಯೊಳಗೆ ಸಿಕ್ಕಿತು ಪ್ಲಾಸ್ಟಿಕ್ ಬ್ಯಾಗ್!
ಹಾಗಾಗಿ, ಸಾಕಷ್ಟು ಭ್ರಷ್ಟಾಚಾರ ಆರೋಪ ಕೇಳಿ ಬಂದಿರುವ ಹಿನ್ನೆಲೆ ಎಸಿಬಿ ದಾಳಿ ನಡೆಸಿದೆ ಎನ್ನಲಾಗ್ತಿದೆ. ಕೋಲಾರ ಎಸಿಬಿ ಡಿವೈಎಸ್‌ಪಿ ಪುರುಶೋತ್ತಮ್ ನೇತೃತ್ವದಲ್ಲಿ 10ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿಯಿಂದ ಪ್ರಮುಖ ಕಡತಗಳ ಪರಿಶೀಲನೆ ಮುಂದುವರೆದಿದೆ.