ಕೋಲಾರ: ಹದಿನೇಳು ವರ್ಷದ ಬಾಲಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಕೋಲಾರದಲ್ಲಿ ಕಳೆದ ರಾತ್ರಿ ನಡೆದಿದೆ. ಶುಕ್ರವಾರ ಸಂಜೆ 7.30ರ ಸುಮಾರಿಗೆ ಪಿ.ಸಿ (ಪೇಟೆ ಚಾಮನಹಳ್ಳಿ) ಬಡಾವಣೆಯ ಸರ್ಕಾರಿ ಶಾಲೆಯ ಆವರಣದಲ್ಲಿ ಬಾಲಕನ ಬರ್ಬರ ಹತ್ಯೆ ಆಗಿದೆ. ಪಿ.ಸಿ ಬಡಾವಣೆಯ ನಿವಾಸಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಅರುಣ್ ಸಿಂಗ್ ಎಂಬವರ ಮಗ ಕಾರ್ತಿಕ್ ಸಿಂಗ್ ಕೊಲೆಯಾಗಿರುವ ಬಾಲಕ.
ಕೋಲಾರದ ಎಸ್.ಡಿ.ಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಕಾರ್ತಿಕ್, ನಿನ್ನೆ ಬೆಳಗ್ಗೆಯಿಂದ ಹೊಟ್ಟೆ ನೋವು ಅನ್ನೋ ಕಾರಣಕ್ಕೆ ಕಾಲೇಜಿಗೆ ಹೋಗದೆ ಮನೆಯಲ್ಲೇ ಇದ್ದನಂತೆ. ಸಂಜೆ ವೇಳೆ ಯಾರೋ ಸ್ನೇಹಿತರು ಕರೆ ಮಾಡಿ ಬಾ ಅಂದಿದ್ದಾರೆ. ಹಾಗಾಗಿ 5.30ರ ಸುಮಾರಿಗೆ ಕಾರ್ತಿಕ್ ಮನೆಯಿಂದ ಹೊರ ಹೋಗಿದ್ದಾನೆ. ಸುಮಾರು 7 ಗಂಟೆ ಸುಮಾರಿಗೆ ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಎಲ್ಲೋ ಹೋಗಿರಬೇಕು, ಬರ್ತಾನೆ ಎಂದುಕೊಂಡು ಮನೆಯವರು ಕೂಡ ಸುಮ್ಮನಾಗಿದ್ದರು. ಆದರೆ, ಸುಮಾರು 9 ಗಂಟೆಗೆ ವ್ಯಕ್ತಿಯೊಬ್ಬರು, ನಿಮ್ಮ ಮಗನನ್ನು ಹೊಡೆದು ಹಾಕಿ ಕೊಲೆ ಮಾಡಿದ್ದಾರೆಂದು ಮನೆಯವರಿಗೆ ತಿಳಿಸಿದ್ದಾರೆ. ಕೂಡಲೇ ಶಾಲೆ ಬಳಿ ಬಂದ ಕುಟುಂಬಸ್ಥರು ಕಾರ್ತಿಕ್ ಕೊಲೆಯಾಗಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಘಟನೆ ಸಂಬಂಧ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದಕ್ಕೂ ಮುನ್ನ, ಪಿ.ಸಿ ಬಡವಾಣೆ ಹಾಗೂ ಆರೋಹಳ್ಳಿ ಏರಿಯಾದ ಕೆಲವು ಹುಡುಗರ ಗ್ಯಾಂಗ್ನೊಂದಿಗೆ ಸ್ನೇಹ ಮಾಡಿದ್ದ ಕಾರ್ತಿಕ್, ಕಳೆದ ಕೆಲವು ದಿನಗಳ ಹಿಂದೆ ಅದೇ ಗ್ಯಾಂಗ್ ಹುಡುಗರಿಂದ ಏಟು ತಿಂದು ಗಲಾಟೆಯಾಗಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಎಂಟು ತಿಂಗಳ ಹಿಂದೆ ಬರ್ತ್ಡೇ ಪಾರ್ಟಿಗೆ ಹೋಗಿಲ್ಲ ಎಂದು ಕಾರ್ತಿಕ್ ಬಟ್ಟೆ ಬಿಚ್ಚಿ ಥಳಿಸಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಸದ್ಯ ಇದೇ ಹುಡುಗರು ಕಾರ್ತಿಕ್ ಹತ್ಯೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ದಂಪತಿ ಮೇಲೆ ಹಲ್ಲೆ, ಪತಿ ಸಾವು: ಆರೋಪಿಗಳ ಬಂಧನ
ಪ್ರತ್ಯೇಕ ಘಟನೆ: ಸೆಪ್ಟೆಂಬರ್ ತಿಂಗಳಲ್ಲಿ ಇಂತಹದ್ದೇ ಮತ್ತೊಂದು ಪ್ರಕರಣ ಬೆಳಗಾವಿಯಲ್ಲಿ ನಡೆದಿತ್ತು. ಇನ್ಸ್ಟಾಗ್ರಾಮ್ನಲ್ಲಿ ಚಾಟಿಂಗ್ ಮಾಡುತ್ತಿದ್ದ ಒಂದೇ ಊರಿನ ಬಾಲಕರ ನಡುವೆ ವಾಗ್ವಾದ ನಡೆದು, ಓರ್ವ ಬಾಲಕನ ಜೀವ ತೆಗೆಯುವ ಮಟ್ಟಕ್ಕೂ ಹೋಗಿರುವ ಘಟನೆ ಕಿತ್ತೂರು ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿತ್ತು. ಪ್ರಜ್ವಲ್ ಸುಂಕದ(16) ಮೃತ ಬಾಲಕ.
ಮಲ್ಲಪ್ಪ ಹಾಗೂ ಮಲ್ಲವ್ವ ದಂಪತಿಯ ಎರಡನೇ ಮಗನಾದ ಪ್ರಜ್ವಲ್, ಆಗ ತಾನೇ ಕಾಲೇಜು ಮೆಟ್ಟಿಲೇರಿದ್ದ. ಅದಕ್ಕೂ ಮುನ್ನ ತಮ್ಮದೇ ಊರಿನ ಗೆಳೆಯರ ಜೊತೆ ಇನ್ಸ್ಟಾಗ್ರಾಮ್ನಲ್ಲಿ ಜಗಳವಾಡಿಕೊಂಡಿದ್ದ. ಇದು ಕೇವಲ ವಾಗ್ವಾದಕ್ಕೆ ಸಿಮೀತವಾಗದೇ ಆತನ ಜೀವ ತೆಗೆಯುವ ಹಂತಕ್ಕೂ ಹೋಗಿತ್ತು. ಸೆಪ್ಟೆಂಬರ್ 26ರ ಸಂಜೆ 6 ಗಂಟೆ ಸುಮಾರಿಗೆ ತಮ್ಮ ಮನೆ ಮುಂದೆ ನಿಂತಿದ್ದ ಪ್ರಜ್ವಲ್ ಮೇಲೆ ಐವರು ಬಾಲಕರ ತಂಡ ಏಕಾಏಕಿ ದಾಳಿ ಮಾಡಿ ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಜ್ವಲ್ನನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಪ್ರಜ್ವಲ್ ಸಾವನ್ನಪ್ಪಿದ್ದನು.
ಇದನ್ನೂ ಓದಿ: ಕೌಟುಂಬಿಕ ಕಲಹ: ಬೆಂಗಳೂರಲ್ಲಿ ಸಹೋದರ ಸಂಬಂಧಿಯನ್ನೇ ಕೊಲೆಗೈದ ಆರೋಪಿಗಳಿಬ್ಬರ ಬಂಧನ