ಕೋಲಾರ : ಅನುಮಾನಸ್ಪದವಾಗಿ 6 ಜಿಂಕೆಗಳು ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಆನೇಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಇನ್ನು ಆನೇಪುರ ಗ್ರಾಮದ ಮುನಿಸ್ವಾಮಪ್ಪ ಎಂಬುವರ ಹೊಲದಲ್ಲಿ ಒಂದೇ ಕಡೆ 6 ಜಿಂಕೆಗಳು ಸಾವನ್ನಪ್ಪಿದ್ದು, ವಿಷಾಹಾರ ಸೇವಿಸಿ ಜಿಂಕೆಗಳು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೆ ವಕ್ಕಲೇರಿ ಅರಣ್ಯ ಭಾಗದಲ್ಲಿ ಸಾಕಷ್ಟು ಕಾಡು ಪ್ರಾಣಿಗಳು ವಾಸವಿದ್ದು, ಬರಗಾಲ ಆವರಿಸಿರುವ ಹಿನ್ನಲೆ ಆಹಾರ ನೀರನ್ನ ಹುಡುಕಿಕೊಂಡು ಗ್ರಾಮಗಳತ್ತ ಮುಖಮಾಡುತ್ತಿರುವ ಪ್ರಾಣಿಗಳು ಅಪಘಾತಕ್ಕೀಡಾಗಿ, ಬೀದಿ ನಾಯಿಗಳ ದಾಳಿಗೊಳಗಾಗಿ ಸಾವನ್ನಪ್ಪುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಲ್ಲದೆ ಬಿಸಲಿನ ತಾಪ ಹೆಚ್ಚಾಗಿದ್ದು ಕಾಡುಪ್ರಾಣಿಗಳಿಗೆ ಕುಡಿಯುವ ನೀರಿಗೂ ಸಹ ಹಾಹಾಕಾರ ಉಂಟಾಗಿದ್ದು, ಅರಣ್ಯದಲ್ಲಿ ಕಾಡುಪ್ರಾಣಿಗಳಿಗೆ ನೀರು ಮತ್ತು ಆಹಾರದ ವ್ಯವಸ್ಥೆಯನ್ನ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇನ್ನು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.