ಕೋಲಾರ: ದೇವಾಲಯದಲ್ಲಿ ವಿತರಿಸಿದ ಪ್ರಸಾದ ಸೇವಿಸಿ ಭಕ್ತರು ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬೀಗರಾಯನಹಳ್ಳಿಯಲ್ಲಿ ನಡೆದಿದೆ.
ಹೊಸ ವರ್ಷಾರಂಭದ ಹಿನ್ನೆಲೆಯಲ್ಲಿ ಬೈರಗಾನಹಳ್ಳಿ ಗ್ರಾಮದ ಗಂಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ಏರ್ಪಡಿಸಲಾಗಿತ್ತು. ಪೂಜೆಗೆ ಗ್ರಾಮಸ್ಥರು ಸೇರಿದಂತೆ ಅಕ್ಕಪಕ್ಕದ ಗ್ರಾಮದ ನೂರಾರು ಮಂದಿ ಆಗಮಿಸಿದ್ದರು. ಪೂಜೆಯಾದ ಬಳಿಕ ಆಗಮಿಸಿದ್ದ ಜನರಿಗೆ ಕೇಸರಿಬಾತ್ ಹಾಗೂ ಚಿತ್ರಾನ್ನವನ್ನು ಪ್ರಸಾದವಾಗಿ ವಿತರಿಸಲಾಗಿದೆ. ಪ್ರಸಾದ ಸೇವಿಸಿ ಮನೆಗೆ ಹೋದ ಕೆಲ ಭಕ್ತರಿಗೆ ಸಂಜೆ ವೇಳೆಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ. ಕೂಡಲೇ ಅಸ್ವಸ್ಥರನ್ನು ಪಕ್ಕದ ಯಲ್ದೂರು ಸೇರಿದಂತೆ ಶ್ರೀನಿವಾಸಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಹಾಗೂ ಕೆಲವು ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.
19 ಮಕ್ಕಳು ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಜನ ವಿವಿಧ ಆಸ್ಪತ್ರೆಗಳಿಗೆ ಬಂದು ದಾಖಲಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿನ್ನೆ ರಾತ್ರಿ ವೇಳೆಗೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ನಂತರ ಸುಮಾರು ಹತ್ತು ಜನರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಶ್ರೀನಿವಾಸಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೇವಾಲಯದ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.