ಕೋಲಾರ: ಎಸಿಬಿ ಅಧಿಕಾರಿಗಳ ಸೋಗಿನಲ್ಲಿ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಮೂವರು ಚಾಲಾಕಿಗಳ ಅಸಲಿ ಮುಖವಾಡ ಬಯಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸರು ನಕಲಿ ಅಧಿಕಾರಿಗಳ ಹೆಡೆಮುರಿ ಕಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಸಾದಲಗ ಮೂಲದ ಮುರಿಗೆಪ್ಪ, ಸಕಲೇಶಪುರ ಮೂಲದ ರಜನಿಕಾಂತ್, ಮಹಾರಾಷ್ಟ್ರ ಮೂಲದ ರಾಜೇಶ್ ಬಂಧಿತ ಆರೋಪಿಗಳು.
ಈ ಮೂವರು ನಕಲಿ ಎಸಿಬಿ ಅಧಿಕಾರಿಗಳು ಕೋಲಾರದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ನಾರಾಯಣ ಗೌಡ ಎಂಬುವವರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ತಮ್ಮ ಭ್ರಷ್ಟಾಚಾರದ ಬಗ್ಗೆ ನಮಗೆ ಮಾಹಿತಿ ಬಂದಿದೆ. ನಿಮ್ಮ ಮೇಲೆ ದಾಳಿ ಮಾಡದಂತೆ ಇರಬೇಕಾದರೆ ನಾವು ಹೇಳಿದ ಅಕೌಂಟ್ಗೆ ಒಂದು ಲಕ್ಷ ರೂಪಾಯಿ ಹಣ ಹಾಕಿ ಎಂದು ಬೆದರಿಕೆ ಹಾಕಿದ್ದರು. ಇದರಿಂದ ಅನುಮಾನಗೊಂಡ ನಾರಾಯಣ ಗೌಡ ಅವರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಸ್ಪಿ ಡಿ. ದೇವರಾಜ್ ಅವರ ಮಾರ್ಗದರ್ಶನದಲ್ಲಿ ಬಾಗಲಕೋಟೆಯಲ್ಲಿ ಈ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮುರಿಗೆಪ್ಪ 2008ರಲ್ಲಿ ವಜಾಗೊಂಡ ಪೊಲೀಸ್ ಕಾನ್ಸ್ಟೇಬಲ್. ಬಂಧಿತ ಆರೋಪಿಗಳ ವಿರುದ್ಧ ಬೆಂಗಳೂರು ಸೇರಿದಂತೆ ವಿವಿಧ ಠಾಣೆಯಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನಂತರ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಯುವಕನಿಗೆ ಲಾಂಗ್ ತೋರಿಸಿ ಹಣ, ಮೊಬೈಲ್ ಸುಲಿಗೆ: ಡಿ.ಜೆ.ಹಳ್ಳಿಯಲ್ಲಿ ನಡೆದ ಸಿಸಿಟಿವಿ ದೃಶ್ಯ
ಆರೋಪಿಗಳನ್ನು ಪೊಲೀಸ್ ವಾಹನಕ್ಕೆ ಹತ್ತಿಸುವ ಸಮಯದಲ್ಲಿ, ಯಾರೂ ಮಾಡದ ತಪ್ಪನ್ನು ನಾವು ಮಾಡಿಲ್ಲ. ಕೋಟ್ಯಂತರ ಹಣ ಲೂಟಿ ಮಾಡಿದವರನ್ನು ಹೊರ ತಂದವರೇ ನಾವು ಎಂದು ನಕಲಿ ಎಸಿಬಿ ಅಧಿಕಾರಿಗಳು ತಮ್ಮ ಕೆಲಸವನ್ನು ಸಮರ್ಥಿಸಿಕೊಂಡ ಘಟನೆ ನಡೆಯಿತು.