ಕೋಲಾರ: ಶಾಲೆಗಳಲ್ಲಿ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಕೊರೊನಾ ಆತಂಕ ಶುರುವಾಗಿದೆ. ತರಗತಿಗಳು ಆರಂಭವಾಗಿ 5 ದಿನಗಳು ಕಳೆಯುವ ಮುನ್ನವೇ ಜಿಲ್ಲೆಯಲ್ಲಿ 10,400 ವಿದ್ಯಾರ್ಥಿಗಳು ಹಾಗೂ 3,800 ಶಿಕ್ಷಕರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.
ಇದನ್ನೂ ಓದಿ...ಮಾಲೂರು ತಾಲೂಕಿನಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಆರೋಪ: ಅಧಿಕಾರಿಗಳ ಜಾಣ ಕುರುಡು
ಅದರಲ್ಲಿ ಉಪನ್ಯಾಸಕರೂ ಸೇರಿ 9 ಶಿಕ್ಷಕರು, 8 ವಿದ್ಯಾರ್ಥಿಗಳಿಗೆ ಕೋವಿಡ್ ವಕ್ಕರಿಸಿದೆ. ಕೋಲಾರ ತಾಲೂಕಿನಲ್ಲೇ 4 ಶಿಕ್ಷಕರು ಹಾಗೂ 5 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಬಂಗಾರಪೇಟೆ ತಾಲೂಕಿನಲ್ಲಿ ಓರ್ವ ಶಿಕ್ಷಕ, ಮೂವರು ವಿದ್ಯಾರ್ಥಿಗಳಿಗೆ ಮಹಾಮಾರಿ ಅಂಟಿದೆ. ಶ್ರೀನಿವಾಸಪುರದಲ್ಲಿ ಇಬ್ಬರು ಶಿಕ್ಷಕರು ಹಾಗೂ ಮುಳಬಾಗಿಲಿನಲ್ಲಿ ಓರ್ವ ಶಿಕ್ಷಕ ಹಾಗೂ ಒಬ್ಬ ವಿದ್ಯಾರ್ಥಿಗೆ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.
ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೊರೊನಾ ಕಾಣಿಸಿಕೊಂಡಿದ್ದು, ಸೋಂಕಿತರ ಸಂಪರ್ಕಕ್ಕೆ ಬಂದವರ ಪತ್ತೆ ಕಾರ್ಯ ಶುರು ಮಾಡಿಕೊಂಡಿರುವ ಶಿಕ್ಷಣ ಇಲಾಖೆಗೆ ದೊಡ್ಡ ತಲೆನೋವು ತರಿಸಿದೆ. ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಪರೀಕ್ಷೆಗೆ ಒಳಪಡಿಸಿ ಆತಂಕ ಹೆಚ್ಚಾಗದಂತೆ ನೋಡಿಕೊಳ್ಳಲು ಯೋಜನೆ ರೂಪಿಸಿದೆ. ಸಮಾಧಾನದ ಸಂಗತಿಯೆಂದರೆ ಪಾಸಿಟಿವ್ ಬಂದವರೆಲ್ಲಾ ಡಿ. 23ರಿಂದ ಜ. 1ರೊಳಗೆ ಗಂಟಲು ದ್ರವದ ಮಾದರಿ ನೀಡಿದ್ದರು.
ರೋಗ ಲಕ್ಷಣ ಕಾಣಿಸಿಕೊಂಡವರು ಶಾಲೆಗೆ ಬರಲಿಲ್ಲ. ಎಸ್‌ಒಪಿ ನಿಯಮದಂತೆ ಶಾಲಾ-ಕಾಲೇಜುಗಳಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತಿದೆ. ಒಂದು ವೇಳೆ ಶಾಲೆಗೆ ಬಂದಿದ್ದರೆ ಅಂತಹವರನ್ನು ಗುರುತಿಸಿ ಐಸೋಲೇಟ್ ಮಾಡಲಾಗುತ್ತದೆ. ಅಗತ್ಯ ಬಿದ್ದರೆ ಶಾಲೆಗೆ ಸ್ಯಾನಿಟೈಸ್ ಮಾಡಲಾಗುತ್ತದೆ. ಆದರೆ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ಹೇಳಿದರು.