ಕೋಲಾರ: ಕೇರಳದಿಂದ ಬಂದಿದ್ದ 33 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಕೇರಳದಿಂದ ವಿದ್ಯಾರ್ಥಿಗಳು ಜಿಲ್ಲೆಯ ಕೆಜಿಎಫ್ನಲ್ಲಿರುವ ನೂರ್ ನರ್ಸಿಂಗ್ ಕಾಲೇಜಿಗೆ ಬಂದಿದ್ದರು.
ನೂರ್ ನೀಸ್ ನರ್ಸಿಂಗ್ ಕಾಲೇಜಿನಲ್ಲಿ ಈ ಹಿಂದೆ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳೊಂದಿಗೆ, ಹೊಸದಾಗಿ ಕಾಲೇಜಿಗೆ ಸೇರ್ಪಡೆಯಾಗಲು, ಕೇರಳ ಮೂಲದ ಸುಮಾರು 200 ವಿದ್ಯಾರ್ಥಿಗಳು ಕೆಜಿಎಫ್ಗೆ ಆಗಮಿಸಿದ್ದರು. ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ಮಾಡಿದಾಗ ಅವರಲ್ಲಿ 33 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇವರು ಕಾಲೇಜಿನಲ್ಲಿರುವ ಸ್ಥಳೀಯ ವಿದ್ಯಾರ್ಥಿಗಳೊಂದಿಗೂ ಸಂಪರ್ಕದಲ್ಲಿದ್ದರು. ಇದೀಗ ಸೋಂಕು ಕಾಣಿಸಿಕೊಂಡಿರುವ ಪರಿಣಾಮ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿದೆ. ಸೋಂಕು ಕಾಣಿಸಿಕೊಂಡ ವಿದ್ಯಾರ್ಥಿಗಳನ್ನು ಕೋವಿಡ್ ಕೇರ್ ಸೆಂಟರ್ಗೆ ಶಿಫ್ಟ್ ಮಾಡಲಾಗಿದೆ. ಅಲ್ಲದೆ ಕೆಲವರನ್ನು ಬಿಜಿಎಂಎಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ನೂರ್ ನೀಸ್ ನರ್ಸಿಂಗ್ ಕಾಲೇಜನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗಿದ್ದು, ಸೀಲ್ಡೌನ್ ಮಾಡಲಾಗಿದೆ.
ಮತ್ತಷ್ಟು ಮಂದಿಯಲ್ಲಿ ಸೋಂಕು ಕಾಣಿಕೊಳ್ಳುವ ಆತಂಕ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ವಿದ್ಯಾರ್ಥಿಗಳ ಟ್ರಾವೆಲ್ ಹಿಸ್ಟರಿಯನ್ನ ಸಹ ಕಲೆ ಹಾಕಲಾಗುತ್ತಿದೆ.