ಕೊಡಗು : ಪ್ರವಾಸೋದ್ಯಮವನ್ನೇ ಬಂಡವಾಳವಾಗಿಸಿಕೊಂಡಿದ್ದ ಕೊಡಗು ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಸುರಿದ ಮಳೆ ಸರಣಿಯಾಗಿ ಭೀಕರ ಪ್ರವಾಹ ತಂದೊಡ್ಡಿತ್ತು.
ಈ ಮಧ್ಯೆ ಕೊರೊನಾ ಲಾಕ್‌ಡೌನ್ ಘೋಷಿಸಿದ ಬಳಿಕ ಜಿಲ್ಲೆಯ ಜೀವಾಳವಾದ ಪ್ರವಾಸೋದ್ಯಮ ಅಧೋಗತಿ ತಲುಪಿದೆ. ಪ್ರವಾಸೋದ್ಯಮವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದಕ್ಕೆ ಜಿಲ್ಲೆಯ ಜೀಪ್ ಚಾಲಕರು ಕೂಡ ಹೊರತಾಗಿಲ್ಲ.
ಪ್ರವಾಹದ ಹೊಡೆತಕ್ಕೆ ಸಿಲುಕಿ ಆಮೆ ಗತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದ ಪ್ರವಾಸೋದ್ಯಮಕ್ಕೆ ಲಾಕ್‌ಡೌನ್ ಬಿಸಿ ತಟ್ಟಿದೆ. ಕರ್ನಾಟಕದ ಕಾಶ್ಮೀರದ ಸೌಂದರ್ಯ ಸವಿಯಲು ವಾರಾಂತ್ಯದ ಹಾಗೂ ರಜೆ ದಿನಗಳಲ್ಲಿ ಸಾಗರೋಪಾದಿ ಬರುತ್ತಿದ್ದ ಪ್ರವಾಸಿಗರು ಕೊರೊನಾ ಬಳಿಕ ಜಿಲ್ಲೆಯತ್ತ ಮುಖ ಮಾಡುತ್ತಿಲ್ಲ. ಇದರಿಂದ ನಗರದ ಬಸ್ ನಿಲ್ದಾಣದಿಂದ ಸುತ್ತಲ ಪ್ರವಾಸಿ ತಾಣಗಳಿಗೆ ಬಾಡಿಗೆ ಮಾಡುತ್ತಿದ್ದ ಜೀಪ್ ಚಾಲಕರ ಸ್ಥಿತಿ ಹೇಳತೀರದಾಗಿದೆ. ಲಾಕ್‌ಡೌನ್ ಸಡಿಲಗೊಳಿಸಿದ್ರೂ ಕೊರೊನಾ ಭೀತಿ ಇರುವುದರಿಂದ ಜನ ಇತ್ತ ಸುಳಿಯುತ್ತಿಲ್ಲ.
ನಿಲ್ದಾಣದಲ್ಲಿರುವ ಸುಮಾರು150 ಜೀಪ್‌ಗಳಲ್ಲಿ ಹಲವರು ಸಾಲ ಮಾಡಿ ಜೀಪ್ ತೆಗೆದುಕೊಂಡಿದ್ದೇವೆ. ಲಾಕ್‌ಡೌನ್‌ಗೂ ಮೊದಲು ಕೃಷಿಗೆ ಸಂಬಂಧಿಸಿದ ವಸ್ತುಗಳ ಬಾಡಿಗೆ, ಗೊಬ್ಬರ ಹಾಗೂ ಪ್ರವಾಸಿಗರನ್ನು ಪ್ರವಾಸಿ ತಾಣಗಳಿಗೆ ತಲುಪಿಸುವ ಮೂಲಕ ಬಾಡಿಗೆ ಮಾಡುತ್ತಿದ್ದೆವು. ನಿತ್ಯ ಸಾವಿರದವರೆಗೆ ದುಡಿಮೆ ಮಾಡುತ್ತಿದ್ದೆವು. ಇದರಿಂದ ಡೀಸೆಲ್, ವಾಹನದ ಮಾಸಿಕ ಕಂತು, ತೆರಿಗೆ ಸೇರಿ ಜೀವನ ನಡೆಸುತ್ತಿದ್ದೆವು.
ಆದರೆ, ಲಾಕ್‌ಡೌನ್ ನಂತರ ಪ್ರವಾಸಿಗರು ಹಾಗೂ ಬಾಡಿಗೆ ಇಲ್ಲದೆ ಬಹಳ ಕಷ್ಟ ಅನುಭವಿಸುತ್ತಿದ್ದೇವೆ. ಕಳೆದ ಪ್ರವಾಹದಲ್ಲಿ ಇದ್ದ ಅಲ್ಪಸ್ವಲ್ಪ ತೋಟವೂ ಕೊಚ್ಚಿ ಹೋಗಿದೆ. ಇದೀಗ ಜೀಪ್ ಓಡಿಸಲೂ ಆಗದೆ ಜೀವನ ನಡೆಸುವುದು ಕಷ್ಟ ಎಂದು ಅಳಲು ತೋಡಿಕೊಂಡಿದ್ದಾರೆ.