ಸಿದ್ದಾಪುರ(ಕೊಡಗು): ಕೊರೊನಾ ಕಲಿಸಿದ ಬದುಕಿನ ಪಾಠದಿಂದ ನಗರದ ಯುವಕನೊಬ್ಬ ಕೋಳಿ ಸಾಕಾಣಿಕೆ ಮೂಲಕ ಬದುಕುವ ದಾರಿ ಕಂಡುಕೊಂಡು ಭವಿಷ್ಯ ರೂಪಿಸಿಕೊಂಡಿದ್ದಾನೆ.
ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿಯ ಎಂ.ಜಿ.ಕಾಲೋನಿ ನಿವಾಸಿ ಸುಬ್ರಮಣಿ ತನ್ನ ಪದವಿ ವ್ಯಾಸಂಗದ ನಂತರ, ಭಾರತದ ಪ್ರತಿಷ್ಠಿತ ಕಾರು ಉತ್ಪಾದನಾ ಕಂಪನಿಯ ತಮಿಳುನಾಡು ಘಟಕದಲ್ಲಿ ಗುಣಮಟ್ಟ ಪರಿಶೋಧಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಬಳಿಕ ಮಡಿಕೇರಿಯ ಪ್ರತಿಷ್ಠಿತ ಫ್ರೆಂಡ್ಲಿ ಮೋಟರ್ ಸಂಸ್ಥೆಯಲ್ಲಿ ಟೆಕ್ನೀಷನ್ ಆಗಿಯೂ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಮಾರ್ಚ್ ತಿಂಗಳಿನಲ್ಲಿ ಕೊರೊನಾ ಲಾಕ್‌ಡೌನ್‌ನಲ್ಲಿ ಕೆಲಸ ಕಳೆದುಕೊಂಡಿದ್ದರೂ ಧೃತಿಗೆಡದ ಸುಬ್ರಮಣಿ ಇದೀಗ ಕುಕ್ಕುಟ್ಟೋದ್ಯಮದ ಮೂಲಕ ಸ್ವಉದ್ಯೋಗದಲ್ಲಿ ಕೈ ತುಂಬಾ ಸಂಪಾದನೆ ಮಾಡುತ್ತಿದ್ದಾರೆ.
ಓದಿ: ನ್ಯಾಯಾಲಯ ಆವರಣದಲ್ಲಿ ಸ್ಥಳಾವಕಾಶದ ಕೊರತೆ.. ಬೀದಿಯಲ್ಲೇ ನಡೆಯಿತು ವಕೀಲರ ದಿನಾಚರಣೆ
ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡ ಸುಬ್ರಮಣಿ, ಸ್ವಉದ್ಯೋಗದ ಚಿಂತನೆಯಲ್ಲಿದ್ದ ಸಂದರ್ಭದಲ್ಲಿ ಯೂಟ್ಯೂಬ್ ಹಾಗೂ ಸಹೋದರರು ಕಡಿಮೆ ಬಂಡವಾಳದಿಂದ ಲಾಭ ಗಳಿಸುವ ಕೋಳಿ ಸಾಕಾಣಿಕೆ ಸಲಹೆ ನೀಡಿದ್ದಾರೆ. ಮನೆಯ ಸಮೀಪದಲ್ಲೇ 20×10 ಅಡಿ ಜಾಗದಲ್ಲಿ 60 ಸಾವಿರ ರೂ ವೆಚ್ಚದಲ್ಲಿ ಸುಸಜ್ಜಿತವಾದ ಕೋಳಿ ಸಾಕಾಣಿಕ ಶೆಡ್ ನಿರ್ಮಿಸಿದ್ದಾರೆ. ಅಲ್ಲದೆ 30 ಸಾವಿರ ರೂ.ಗೆ ಮೈಸೂರು, ಕುಶಾಲನಗರ, ಕೂಡಿಗೆ, ಹುಂಡಿ ಇನ್ನಿತರ ಕಡೆಗಳಿಂದ ಉತ್ತಮ ತಳಿಯ ನಾಟಿ ಕೋಳಿ ಮರಿಗಳನ್ನು ಖರೀದಿಸಿದ್ದಾರೆ. ಇವುಗಳ ಸಾಕಾಣಿಕೆಯಿಂದ ಇದೀಗ ಕೋಳಿ ಮರಿಗಳು ಬೆಳೆದಿದ್ದು, ಪ್ರತೀ ದಿನ ವ್ಯಾಪಾರದಲ್ಲಿ ಏರಿಕೆ ಕಂಡುಬರುತ್ತಿದೆ. ಅಲ್ಲದೆ ಇರುವ ಸ್ವಲ್ಪ ಜಾಗದಲ್ಲೇ ಏಲಕ್ಕಿ, ಕಾಫಿ ಹಾಗೂ ಬಾಳೆ ಬೆಳೆದು ಬಾಳು ಬೆಳಗಿಸಿಕೊಂಡು ಇತರರಿಗೂ ಮಾದರಿಯಾಗಿದ್ದಾರೆ.