ಮಡಿಕೇರಿ(ಕೊಡಗು): ನಮಗೆ ಮನಗೆ ಸ್ವಂತ ಮನೆ ಇಲ್ಲ. ರೇಷನ್ ಕಾರ್ಡ್, ಆಧಾರ್ ಕಾರ್ಡ್ ಕೂಡ ಇಲ್ಲ. ಕೂಲಿ ಕೆಲಸ ಮಾಡಿ ನಮ್ಮನ್ನು ಸಾಕುತ್ತಿದ್ದ ಗಂಡ ಕೂಡ ಹುಲಿ ದಾಳಿಗೆ ಬಲಿಯಾಗಿದ್ದಾರೆ. ಇಬ್ಬರು ಮಕ್ಕಳಿದ್ದು ಮನೆಯಲ್ಲಿ ಊಟಕ್ಕೆ ಗತಿ ಇಲ್ಲ ಎಂದು ಕೊಡಗಿನಲ್ಲಿ ಹುಲಿ ದಾಳಿಗೆ ಬಲಿಯಾದ ವ್ಯಕ್ತಿಯ ಪತ್ನಿ, ಆರಣ್ಯ ಇಲಾಖೆ ಸಚಿವ ಉಮೇಶ್ ಕತ್ತಿ ಮುಂದೆ ಕಣ್ಣೀರಿಟ್ಟಿದ್ದಾರೆ.
ಕೊಡಗು ಜಿಲ್ಲೆಯ ವೀರಾಜ್ಪೇಟೆ ತಾಲೂಕಿನ ರುದ್ರಗುಪ್ಪೆ ಗ್ರಾಮದಲ್ಲಿ ನರಭಕ್ಷಕ ಹುಲಿಯ ಅಟ್ಟಹಾಸಕ್ಕೆ 28 ವರ್ಷದ ಕಾರ್ಮಿಕ ಗಣೇಶ್ ಬಲಿಯಾಗಿದ್ದರು. ಪರಿಣಾಮ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಹುಲಿ ದಾಳಿಗೆ ಬಲಿಯಾದ ಕುಟುಂಬಕ್ಕೆ ಸಚಿವರು 5 ಲಕ್ಷ ರೂ. ಚೆಕ್ ವಿತರಣೆ ಮಾಡಿದ್ದಾರೆ. ಆದ್ರೆ, ಚೆಕ್ನಿಂದ ಹಣ ಪಡೆಯಲು ನನ್ನ ಬಳಿ ಅಕೌಂಟ್ ಇಲ್ಲ. ಆಧಾರ್ ಕಾರ್ಡ್ ಹಾಗೂ ಇರಲು ಸ್ವಂತ ಮನೆಯಿಲ್ಲ. ನನಗೆ ಇಬ್ಬರು ಮಕ್ಕಳು ಇದ್ದಾರೆ ಅವರ ಗತಿ ಏನು?, ನಮ್ಮ ಕಷ್ಟ ಕೇಳಲು ಯಾರು ಬರುತ್ತಿಲ್ಲ ಎಂದು ಮಹಿಳೆ ಸಚಿವರ ಮುಂದೆ ಕಣ್ಣೀರು ಹಾಕಿದ್ದಾರೆ.
ಮಹಿಳೆಯ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ನಿಮ್ಮ ಕಷ್ಟಗಳನ್ನು ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಸೂಕ್ತ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ರೈತ ಸಂಘದಿಂದ ಆಗ್ರಹ: ಕಾಡಿನಿಂದ ನಾಡಿಗೆ ಬಂದ ಪ್ರಾಣಿಗಳು ಮನುಷ್ಯರನ್ನು ಬಲಿ ಪಡೆದುಕೊಳ್ಳುತ್ತಿವೆ. ಕೊಡಗಿನಲ್ಲಿ ಎಲ್ಲಾ ಜನರಿಗೂ ಸ್ವಂತ ಸೂರು ಕಲ್ಪಿಸಬೇಕು. ಕಾಡು ಪ್ರಾಣಿಗಳು ನಾಡಿಗೆ ಬರದಂತೆ ತಡೆಯಬೇಕು, ದಾಳಿಗೆ ಒಳಗಾದ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು. ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ರೈತ ಸಂಘ ಆಗ್ರಹಿಸಿದೆ.
ಇದನ್ನೂ ಓದಿ: ಮಗು ಮಡಿಲಲ್ಲಿ ಇಟ್ಕೊಂಡು ಡ್ಯೂಟಿ ನಿರ್ವಹಿಸುವ ಮಹಿಳಾ ಕಾನ್ಸ್ಟೇಬಲ್!