ಕೊಡಗು: ಜಿಲ್ಲೆಯಲ್ಲಿ ನಾಳೆ ಮೊದಲ ಹಂತದಲ್ಲಿ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ ಒಟ್ಟು 66 ಗ್ರಾಮ ಪಂಚಾಯಿತಿಗಳಲ್ಲಿ ಮತದಾನ ನಡೆಯುತ್ತಿರುವುದರಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಸಂಜೆ 4ರಿಂದ 5 ಗಂಟೆಯವರೆಗೆ ಕೊರೊನಾ ಸೋಂಕಿತರಿಗೆ ಪ್ರತ್ಯೇಕ ಅವಧಿಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಕಾಡಾನೆ ಭೀತಿ ಹಾಗೂ ನಕ್ಸಲ್ ಚಟುವಟಿಕೆಯಿರುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸೂಕ್ತವಾದ ಬಿಗಿ ಪೊಲೀಸ್ ಭದ್ರತೆ ಒದಗಿಸಗಿದೆ. 206 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ಪೊಲೀಸ್ ಕಾರ್ಯಪಡೆಯನ್ನು ರಚಿಸಲಾಗಿದೆ. ಮತದಾರರು ಯಾವುದೇ ಭೀತಿ ಇಲ್ಲದೆ ಮತ ಚಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ.
ಮಡಿಕೇರಿಯಲ್ಲಿ 135 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 222 ಸೇರಿದಂತೆ ಒಟ್ಟು 357 ಮತಗಟ್ಟೆಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಮತದಾನ ನಡೆಯಲಿದೆ. ಮಡಿಕೇರಿ ತಾಲೂಕಿನ 108 ಕ್ಷೇತ್ರಗಳಲ್ಲಿ 257 ಸ್ಥಾನಗಳಿಗೆ ಮತ್ತು ಸೋಮವಾರಪೇಟೆ ತಾಲೂಕಿನ 177 ಕ್ಷೇತ್ರಗಳಲ್ಲಿ 462 ಸ್ಥಾನಗಳು ಸೇರಿದಂತೆ ಒಟ್ಟು 1488 ಅಭ್ಯರ್ಥಿಗಳು ಚುನಾವಣ ಅಖಾಡದಲ್ಲಿದ್ದಾರೆ.
ಮಡಿಕೇರಿ ತಾಲೂಕಿನಲ್ಲಿ 45 ಸೂಕ್ಷ್ಮ, 6 ಅತೀ ಸೂಕ್ಷ್ಮ, 8 ನಕ್ಸಲ್ ಪೀಡಿತ, 80 ಸಾಮಾನ್ಯ, ಸೋಮವಾರಪೇಟೆ ತಾಲೂಕಿನಲ್ಲಿ 48 ಸೂಕ್ಷ್ಮ, 24 ಅತೀ ಸೂಕ್ಷ್ಮ, 154 ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.