ಮಡಿಕೇರಿ: ಮಳೆಗಾಲ ಆರಂಭವಾದರೆ ಜಲಪಾತಗಳಿಗೆ ಜೀವ ಕಳೆ ಬರುತ್ತದೆ. ಬೆಟ್ಟ - ಗುಡ್ಡಗಳ ಮೇಲಿಂದ ಹಾಲ್ನೊರೆಯಂತೆ ಹರಿಯುವ ಜಲಧಾರೆಯ ವೈಯ್ಯಾರ ನೋಡಲು ಅಲ್ಲಿಗೆ ಅದೆಷ್ಟೋ ಪ್ರವಾಸಿಗರು ಬರುತ್ತಾರೆ. ಆದರೆ, ಜಲಪಾಗಳು ಎಷ್ಟು ಸುಂದವೋ ಅಷ್ಟೇ ಅಪಾಯಕಾರಿ ಕೂಡ ಹೌದು.
ಪ್ರವಾಸಿಗರನ್ನು ಸೂಜಿ ಗಲ್ಲಿನಂತೆ ಸೆಳೆಯುವ ಕೊಡಗು ಜಿಲ್ಲೆಯ ಜಲಪಾತಗಳನ್ನ ನೋಡಲು ಬರುವ ಎಷ್ಟೋ ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಉದಾಹರಣೆಗಳಿವೆ. ಜಲಪಾತ ನೋಡಲು ಬರುವವರು ಅಲ್ಲಿನ ತಣ್ಣನೆಯ ನೀರಿನಲ್ಲಿ ಆಟವಾಡಲು ಇಳಿದು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಷ್ಟೇ ಕೊಡಗು ಜಿಲ್ಲೆಯ ಕೋಟೆ ಅಬ್ಬಿ ಜಲಪಾತಕ್ಕೆ ಪ್ರವಾಸಕ್ಕೆ ಬಂದ ಮೂವರು ಜೀವ ಕಳೆದುಕೊಂಡಿದ್ದಾರೆ.
ಮಳೆಗಾಲ ಆರಂಭವಾದರೆ ಕೊಡಗಿನ ಜಲಪಾತಗಳಿಗೆ ಜೀವಕಳೆ ಬರುತ್ತದೆ. ಇಲ್ಲಿ ಸುಮಾರು 10ಕ್ಕೂ ಹೆಚ್ಚು ಜಲಪಾತಗಳು ತುಂಬಿ ಹರಿಯುತ್ತವೆ. ಅಬ್ಬಿ, ಸೋಮವಾರಪೇಟೆ ಮಲಳ್ಳಿ, ಇರ್ಪು , ಚೇಲವಾರ ಫಾಲ್ಸ್ ಹೀಗೆ ಹಲವು ಜಲಪಾತಗಳಲ್ಲಿ ಪ್ರವಾಸಿಗರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಜಲಪಾತ ನೋಡಲು ಸುಂದರವಾಗಿ ಕಾಣುತ್ತದೆ. ಆದರೆ, ಜಲಪಾತದ ಕೆಳಗಿರುವ ಆಳ ಯಾರಿಗೂ ತಿಳಿದಿಲ್ಲ. ನೀರಿನಲ್ಲಿ ಆಟವಾಡಲು ಇಳಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ.
ಕೊಡಗಿನ ಬೆಟ್ಟ, ಗುಡ್ಡಗಳ ಸೌಂದರ್ಯ, ಮಂಜು ಮುಸುಕಿದ ವಾತಾವರಣ, ಮಳೆಗಾಲದಲ್ಲಿ ಕಾಣಸಿಗುವ ಜಲಪಾತಗಳನ್ನು ನೋಡಲು ಜಿಲ್ಲೆಗೆ ಹೊರ ರಾಜ್ಯ, ದೇಶಗಳಿಂದ ಪ್ರವಾಸಿಗರು ಬರುತ್ತಾರೆ. 'ಅಪಾಯದ ಸ್ಥಳ' ಎಂದು ನಾಮ ಫಲಕಗಳನ್ನು ಹಾಕಿದರೂ ಅನೇಕರು ಅದನ್ನು ಕಡೆಗಣಿಸಿ ಅಪಾಯ ತಂದು ಕೊಳ್ಳುತ್ತಿದ್ದಾರೆ.
ಈಗಾಗಲೇ ಎಷ್ಟೋ ಪ್ರವಾಸಿಗರು ನದಿಗಳಲ್ಲಿ ಜಲಪಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದು, ಎಚ್ಚರಿಕೆ ವಹಿಸಬೇಕು. ಜಿಲ್ಲೆಯಲ್ಲಿ ಅಪಾಯಕಾರಿ ಸ್ಥಳ ಗುರುತು ಮಾಡಿ ಅಂತಹ ಸ್ಥಳಗಳನ್ನು ದೂರದಿಂದಲೇ ನೋಡಿ ಕೊಂಡು ಹೋಗುವ ವ್ಯವಸ್ಥೆ ಮಾಡಬೇಕು. ಅಪಾಯವಿರುವ ಜಲಪಾತಗಳಿಗೆ ಸಿಬ್ಬಂದಿ ನಿಯೋಜನೆ ಮಾಡಬೇಕು, ಪ್ರವಾಸಿ ಸ್ಥಳಗಳ ಕುರಿತು ಪೊಲೀಸ್ ಇಲಾಖೆ ಕಟು ನಿಟ್ಟಿನ ಕ್ರಮ ಕೈಗೊಂಡರೆ ಮಾತ್ರ ಜಿಲ್ಲೆಗೆ ಬರುವ ಪ್ರವಾಸಿಗರ ಪ್ರಾಣ ಉಳಿಸಬಹುದಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದನ್ನು ಓದಿ:ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರ ಸಾವು