ಕೊಡಗು : ಮಳೆಗಾಲದಲ್ಲಿ ತುಂಬಿ ಹರಿದು ಪ್ರವಾಹ ಉಂಟು ಮಾಡುತ್ತಿದ್ದ ಜೀವನದಿ ಕಾವೇರಿಯಲ್ಲಿ ಇದೀಗ ಮಾರ್ಚ್ ಆರಂಭದಲ್ಲೇ ನೀರಿನ ಹರಿವಿನ ಪ್ರಮಾಣ ಬಹುತೇಕ ಕ್ಷೀಣಗೊಳ್ಳುತ್ತಿದೆ.
ಹೀಗೆ ಮುಂದುವರೆದಲ್ಲಿ ಒಂದು ವಾರದ ಅವಧಿಯಲ್ಲಿ ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ನಾಗರಿಕರಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆಯಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಕೊಡಗಿನಲ್ಲಿ ಹುಟ್ಟಿ ನಾಡಿನ ಉದ್ದಗಲಕ್ಕೂ ಹರಿದು ರೈತರ ಪಾಲಿಗೆ ವರದಾನವಾಗಿರುವ ಕಾವೇರಿ ನದಿಯ ಒಡಲು ಇದೀಗ ಕೊಡಗಿನಲ್ಲಿಯೇ ಬರಿದಾಗುತ್ತಿದೆ. ವರ್ಷದ 4 ತಿಂಗಳು ತುಂಬಿ ಹರಿಯುವ ಕಾವೇರಿಯಲ್ಲಿ ಇದೀಗ ನೀರಿನ ಹರಿವಿನ ಕೊರತೆ ಎದ್ದು ಕಾಣುತ್ತಿದೆ. ಈ ಬಾರಿ ನಿರಂತರವಾಗಿ ಮಳೆ ಸುರಿದರೂ ಕಾವೇರಿ ನದಿ ಜಲಮೂಲಗಳು ಅಲ್ಲಲ್ಲಿ ಬತ್ತಿಹೋಗಿರುವ ದೃಶ್ಯ ಗೋಚರಿಸುತ್ತಿವೆ.
ಕಳೆದ ಕೆಲವು ದಿನಗಳಿಂದ ಮೂಲ ಕಾವೇರಿಯಿಂದ ಕುಶಾಲನಗರದವರೆಗೆ ಕೃಷಿಕರು ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಅವಶ್ಯವಿರುವ ನೀರಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಮೋಟಾರ್ ಪಂಪ್ಗಳನ್ನು ಅಳವಡಿಸಿದ್ದಾರೆ. ಇದರಿಂದ ನದಿಯಲ್ಲಿ ನೀರಿನ ಹರಿವು ಅಲ್ಲಲ್ಲಿ ಬತ್ತಿ ಹೋಗುತ್ತಿದೆ.
ನದಿ ತಟದಲ್ಲಿರುವ ಕೃಷಿಕರು ವಾಣಿಜ್ಯ ಬೆಳೆ ಸೇರಿದಂತೆ ವಾಣಿಜ್ಯ ಕಟ್ಟಡಗಳಿಗೆ ನೀರು ಪಂಪ್ ಮಾಡುತ್ತಿದ್ದು, ಇದರಿಂದ ನದಿಯಲ್ಲಿ ನೀರಿನ ಕೊರತೆ ಉಂಟಾಗಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.
ಕುಶಾಲನಗರ ಮತ್ತು ಮುಳ್ಳುಸೋಗೆ ವ್ಯಾಪ್ತಿಯ ಪಟ್ಟಣಕ್ಕೆ ನಿತ್ಯ 35 ಲಕ್ಷ ಲೀಟರ್ ನೀರಿನ ಅಗತ್ಯವಿದ್ದು, ಜಲಮಂಡಳಿ ಮೂಲಕ ಕೇವಲ 28 ಲಕ್ಷ ಲೀಟರ್ ನೀರನ್ನು ಪೂರೈಸಲಾಗುತ್ತಿದೆ. ಪ್ರತಿಯೊಬ್ಬ ನಾಗರಿಕನಿಗೆ ನಿತ್ಯ 135 ಲೀಟರ್ ನೀರು ಅಗತ್ಯವಿದ್ದು, ಇದನ್ನು ಪೂರೈಸಲು ಪ್ರಸಕ್ತ ಸ್ಥಿತಿಯಲ್ಲಿ ಆಗುತ್ತಿಲ್ಲ.
ಪಟ್ಟಣ ಪಂಚಾಯತ್‌ನಿಂದ ನೀರು ಸರಬರಾಜು ಮಾಡುತ್ತಿರುವ ಸಂದರ್ಭದಲ್ಲಿ ನೀರು ಪೋಲಾಗದಂತೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕಾಗಿದೆ ಎಂದು ಅಧಿಕಾರಿಗಳು ಸೂಚನೆ ನೀಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ.
ಅಲ್ಲದೇ ಕಳೆದ ನಾಲ್ಕು ವರ್ಷಗಳಲ್ಲಿ ಪ್ರವಾಹ ಬಂದು ಭೂಕುಸಿತವಾದ ಪರಿಣಾಮದಿಂದ ಸಾಕಷ್ಟು ಹೂಳು ಕಾವೇರಿ ನದಿಯ ಒಡಲು ಸೇರಿದೆ. ಹೀಗಾಗಿ, ನೀರಿನ ಶೇಖರಣೆ ಸಾಕಷ್ಟು ಕುಂಠಿತವಾಗಿದೆ ಎನ್ನುವುದು ಈ ಭಾಗದ ಜನರ ಅಭಿಪ್ರಾಯ.
ಕಾವೇರಿ ನದಿಯ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಇದೇ ರೀತಿ ನೀರಿನ ಹರಿವು ಅಲ್ಲಲ್ಲಿ ಸ್ಥಗಿತಗೊಂಡರೇ, ಮುಂದಿನ ದಿನಗಳಲ್ಲಿ ಪ್ರಾಣಿ ಪಕ್ಷಿಗಳು ಸೇರಿದಂತೆ ಕುಶಾಲನಗರದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ನೀರಿನ ಹಾಹಾಕಾರ ಉಂಟಾಗುವುದರಲ್ಲಿ ಸಂಶಯವಿಲ್ಲ.
ಇದನ್ನೂ ಓದಿ: ವಿಶ್ವ ಜಲ ದಿನದಂದೇ ಅರ್ಧ ಬೆಂಗಳೂರಿಗೆ ಕುಡಿಯುವ ನೀರು ಸ್ಥಗಿತ!