ಭಾಗಮಂಡಲ (ಕೊಡಗು): ಭಾಗಮಂಡಲದಲ್ಲಿ ಶ್ರೀ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯದ ಜಾಗದಲ್ಲಿ ಗ್ರಾಮೀಣ ಕುಡಿಯವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ 1.4 ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ನೀರು ನಿರ್ವಹಣಾ ಘಟಕದ ಕಾಮಗಾರಿ ಆರಂಭಗೊಂಡಿದ್ದು, ದೇವಾಲಯ ಜಾಗದಲ್ಲಿ ಈ ಘಟಕ ಸ್ಥಾಪನೆ ಮಾಡುತ್ತಿರುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಮಳೆಗಾಲದ ಸಂದರ್ಭದಲ್ಲಿ ಭಾಗಮಂಡಲದಲ್ಲಿ ಪ್ರತೀ ವರ್ಷ ಪ್ರವಾಹ ಉಂಟಾಗುತ್ತದೆ. ಈ ಸಂದರ್ಭದಲ್ಲಿ ತ್ಯಾಜ್ಯ ನೀರು ಹಾಗೂ ಶೌಚಾಲಯದ ನೀರು ಕಾವೇರಿ ಒಡಲು ಸೇರಿಕೊಳ್ಳುತ್ತದೆ. ಈ ಹಿನ್ನೆಲೆ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲು ಹಲವರು ಈ ಹಿಂದೆಯೇ ಒತ್ತಾಯಿಸಿದ್ದರು. ಅದರಂತೆ ಇದೀಗ ದೇವಾಲಯದ ಜಾಗದಲ್ಲಿ ಕಾಮಗಾರಿ ಆರಂಭವಾಗಿದೆ.
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಸ್ಥಾನದ ಸರ್ವೆ ನಂ. 94/6ರ 13.20 ಎಕರೆ ಜಾಗವಿದ್ದು, 20 ಸೆಂಟ್ ಜಾಗದಲ್ಲಿ ಈ ಘಟಕ ಬರಲಿದೆ. ದೇವಾಲಯದ ಜಾಗದಲ್ಲಿ ಇಂತಹ ಯೋಜನೆ ಬರಬಾರದು. ದೇವಾಲಯಕ್ಕೆ ಸಂಬಂಧಿಸಿದ ಕೆಲಸಕ್ಕೆ ಮಾತ್ರ ದೇವಾಲಯದ ಜಾಗವನ್ನು ಉಪಯೋಗಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ.
ಭಾಗಮಂಡಲದ ತ್ರಿವೇಣಿ ಸಂಗಮದ ಬಳಿ ಸದ್ಯಕ್ಕೆ ಪಾರ್ಕಿಂಗ್ ವ್ಯವಸ್ಥೆಯಿದೆ. ಇಲ್ಲಿ ಪ್ರವಾಸಿಗರು ಅಡುಗೆ, ತ್ಯಾಜ್ಯವನ್ನು ಎಸೆಯುತ್ತಿರುವುದು ಸಾಮಾನ್ಯವಾಗಿದೆ. ಈ ಕಾರಣದಿಂದಲೂ ಸಂಗಮ ಕಲುಷಿತವಾಗುತ್ತಿದೆ. ಆದ್ದರಿಂದ ದೇವಾಲಯದ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕಿತ್ತು. ತ್ಯಾಜ್ಯ ನೀರು ನಿರ್ವಹಣಾ ಘಟಕಕ್ಕೆ ಬೇರೆ ಜಾಗ ಹುಡುಕಿ ಅಲ್ಲಿ ಮಾಡುವುದು ಸೂಕ್ತ ಎಂದು ಭಾಗಮಂಡಲ-ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಿ.ಎಸ್.ತಮ್ಮಯ್ಯ ಆಗ್ರಹಿಸಿದ್ದಾರೆ.
ನೀರು ಕಲುಷಿತ ತಡೆಯಲು ಯೋಜನೆ
ದೇವಾಲಯದ ಅಂದಾಜು 20 ಸೆಂಟ್ ಜಾಗದಲ್ಲಿ ಲಿಕ್ವಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಘಟಕ ನಿರ್ಮಾಣವಾಗಲಿದೆ. ತ್ಯಾಜ್ಯ ನೀರನ್ನು ಈ ಘಟಕದಲ್ಲಿ ಸಂಸ್ಕರಣೆ ಮಾಡಲಾಗುತ್ತದೆ. ಈಗಾಗಲೇ ಘಟಕ ಆರಂಭಿಸಲು ಭಾಗಮಂಡಲದ ದೇವಾಲಯದ ಜಾಗವನ್ನು ಸಮತಟ್ಟು ಮಾಡಲಾಗಿದೆ. ಘಟಕ ಮೂರು ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.