ಬೆಂಗಳೂರು : ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಮಡಿಕೇರಿ ನಗರಸಭೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಸಂಬಂಧ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಎಸ್ ಪಿಸಿಬಿ) ಹಾಗೂ ಸರ್ಕಾರದ ಸೂಚನೆಗಳ ಪ್ರಕಾರ ಕ್ರಮಕೈಗೊಳ್ಳಬೇಕು ಎಂದು ನಗರಸಭೆ ಆಯುಕ್ತರಿಗೆ ನಿರ್ದೇಶಿಸಿದೆ.
ಮಡಿಕೇರಿಯ ಐತಿಹಾಸಿಕ ಸ್ಟೋನ್ ಹಿಲ್ ಪ್ರದೇಶದಲ್ಲಿ ಅಕ್ರಮವಾಗಿ ಹಾಗೂ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ನಗರಸಭೆ ಕ್ರಮ ಪ್ರಶ್ನಿಸಿ ಎಸ್.ಆರ್.ವಿ.ಕೆ. ವೆಲ್ಫೇರ್ ಅಸೋಸಿಯೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲೆ ಅನು ಚೆಂಗಪ್ಪ ವಾದಿಸಿ, ನಗರಸಭೆ ಇನ್ನೂ ಅವೈಜ್ಞಾನಿಕ ರೀತಿಯಲ್ಲೇ ತ್ಯಾಜ್ಯವನ್ನು ಸುರಿಯುತ್ತಿದೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಸರ್ಕಾರಿ ವಕೀಲರು ಉತ್ತರಿಸಿ, ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆಯನ್ನು ಆಧರಿಸಿ ಹೇಗೆ ಮತ್ತು ಯಾವ ರೀತಿ ತ್ಯಾಜ್ಯ ವಿಲೇವಾರಿ ಮಾಡಬೇಕು ಎಂಬ ಕುರಿತು ನಾಲ್ಕು ಬಾರಿ ನಗರಸಭೆಗೆ ನಿರ್ದೇಶನ ನೀಡಿದ್ದೇವೆ. ಆದರೆ, ಅದನ್ನು ನಗರಸಭೆ ಪಾಲಿಸುತ್ತಿಲ್ಲ ಎಂದರು.
ನಗರಸಭೆ ಪರ ವಕೀಲರು, ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು. ನಗರಸಭೆ ವಕೀಲರ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ ಪೀಠ, ನಗರಸಭೆ ಕೂಡಲೇ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ಪಾಲಿಸಬೇಕು, ಯಾವುದೇ ವಿಳಂಬ ಮಾಡುವಂತಿಲ್ಲ.
ಮಳೆಗಾಲ ಬರುತ್ತಿದ್ದು, ಮಂಗಳೂರಿನಲ್ಲಿ ನಡೆದ ಭೂಭರ್ತಿ ಘಟಕ ಕುಸಿತದಂತಹ ದುರಂತ ಮಡಿಕೇರಿಯಲ್ಲಿ ಮರುಕಳಿಸಬಾರದು. ಹೀಗಾಗಿ ನಗರಸಭೆ ಕೂಡಲೇ ನಿರ್ದೇಶನ ಪಾಲನೆಗೆ ಮುಂದಾಗಬೇಕು ಎಂದು ತಾಕೀತು ಮಾಡಿತು. ಅಲ್ಲದೆ, ರಾಜ್ಯ ಸರ್ಕಾರ ನೀಡಿರುವ ನಿರ್ದೇಶನಗಳನ್ನು ಪಾಲಿಸಿರುವ ಕುರಿತು ಜೂ.1ರೊಳಗೆ ವರದಿ ಸಲ್ಲಿಸುವಂತೆ ನಗರಸಭೆ ಆಯುಕ್ತರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.