ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಕೇವಲ 24 ಗಂಟೆಗಳಲ್ಲಿ ಹುಲಿಯೊಂದು ಇಬ್ಬರನ್ನು ಬಲಿ ಪಡೆದಿದೆ. ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕನನ್ನು ಮತ್ತು ಮೊಮ್ಮಗನ ಶವ ನೋಡಲು ಬಂದ ತಾತನನ್ನು ಹುಲಿ ಬಲಿ ಪಡೆದಿರುವುದು ತಿಳಿದುಬಂದಿದೆ. ಇಬ್ಬರ ಮೇಲೆ ಹುಲಿಯೊಂದು ದಾಳಿ ಮಾಡಿ ಎಳೆದೊಯ್ದ ಘಟನೆ ಪೊನ್ನಂಪೇಟೆ ತಾಲೂಕಿನ ಕುಟ್ಟ ಸಮೀಪದ ಪಲ್ಲೇರಿ ಗ್ರಾಮದಲ್ಲಿ ನಡೆದಿದೆ.
ವೃದ್ಧನನ್ನು ಎಳೆದೊಯ್ದ ವ್ಯಾಘ್ರ: ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ದಾಳಿ ಮುಂದುವರೆದಿದೆ. ಕುಟ್ಟ ಗ್ರಾಮದ ಪಲ್ಲೇರಿಯಲ್ಲಿ ಹುಲಿ ದಾಳಿ ಮಾಡಿದ್ದು, ಮೃತರನ್ನು ಪಲ್ಲೇರಿಯ ರಾಜು (70) ಎಂದು ಗುರುತಿಸಲಾಗಿದೆ. ಮೃತ ರಾಜು ಅವರು ಹುಲಿ ದಾಳಿಯಿಂದ ಮೃತಪಟ್ಟ ಮೊಮ್ಮಗನ ನೋಡಲು ಇಂದು ಮುಂಜಾನೆ 7 ಗಂಟೆ ಸುಮಾರಿಗೆ ಮನೆಯಿಂದ ಹೊರಬಂದ ವೇಳೆ ಹುಲಿ ದಾಳಿ ಮಾಡಿ ಎಳೆದೊಯ್ದಿದೆ. ರಾಜು ಅವರ ತಲೆ ಭಾಗಕ್ಕೆ ಹುಲಿ ಕಚ್ಚಿದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದಾಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪದೇ ಪದೇ ದಾಳಿ ಮಾಡುತ್ತಿರುವ ಹುಲಿಯನ್ನು ಸೆರೆ ಹಿಡಿಯಲು ಈಗಾಗಲೇ ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಬಾಲಕನ ಬಲಿ ಪಡೆದ ಹುಲಿ: ಇದಕ್ಕೂ ಮುನ್ನ ಹುಲಿಯೊಂದು ಬಾಲಕನನ್ನು ಬಲಿ ಪಡೆದಿತ್ತು. ಕೆ ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂರಿಕಾಡು ನೆಲ್ಲಿರ ಪೂಣಚ್ಚ ಎಂಬುವವರ ಮನೆಯಲ್ಲಿ ಕೆಲಸ ಮಾಡಲು ಬಾಲಕ ಮತ್ತು ಪೋಷಕರು ತೆರಳಿದ್ದರು. ಸಂಜೆ ಆರೇಳು ಗಂಟೆಯ ಸುಮಾರಿಗೆ ಕಾಫಿ ತೋಟದ ಮನೆಯ ಮುಂದೆ ಬಾಲಕ ಆಟವಾಡುತ್ತಿದ್ದನು. ಈ ವೇಳೆ ದಾಳಿ ಮಾಡಿದ ಹುಲಿ ಬಾಲಕನನ್ನು ಕೊಂದು ಹಾಕಿದೆ. ಹುಲಿ ದಾಳಿಯಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಜಾನುವಾರಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಈಗ ಬಾಲಕನನ್ನು ಬಲಿ ಪಡೆದ ಹಿನ್ನೆಲೆ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಓದಿ: ಮಾತೃ ಪ್ರೇಮ: ಹುಲಿ ಜೊತೆ ಹೋರಾಡಿ ಮರಿಗಳ ರಕ್ಷಿಸಿದ ತಾಯಿ ಕರಡಿ!
ಹುಲಿ ದಾಳಿಗೆ 12 ವರ್ಷದ ಬಾಲಕ ಚೇತನ್ ಸಾವನ್ನಪ್ಪಿದ್ದಾನೆ. ಕೂಲಿ ಮಾಡಲು ಹುಣಸೂರು ಸಮೀಪದ ಪಂಚವಳ್ಳಿ ಗ್ರಾಮದಿಂದ ಬಂದಿದ್ದ ಕಾರ್ಮಿಕ ಕುಟುಂಬ ಮಗನನ್ನು ಕಳೆದುಕೊಂಡಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಬರಲಿಲ್ಲ ಎಂದು ಆರೋಪಿಸಿ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಮತ್ತು ಪೋಷಕರು ಸ್ಥಳದಲ್ಲಿ ಬಾಲಕನ ಶವವಿಟ್ಟು ಪ್ರತಿಭಟನೆ ಮಾಡಿದ್ದರು.
ಹುಲಿ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಜನ: ಜಿಲ್ಲೆಯಲ್ಲಿ ವನ್ಯಜೀವಿಗಳ ಹಾವಳಿಯಿಂದ ಬೆಳೆಗಾರರು ಹಾಗೂ ರೈತರು ಕಂಗಾಲಾಗಿದ್ದಾರೆ. ಪ್ರತಿನಿತ್ಯ ಕಾಡಿನಿಂದ ನಾಡಿಗೆ ಲಗ್ಗೆ ಇಡೋ ಕಾಡು ಪ್ರಾಣಿಗಳಿಂದ ಕೊಡಗಿನ ಬೆಳೆಗಾರರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಒಂದು ಕಡೆ ಗಜ ಪಡೆಗಳ ಹಾವಳಿಯಾದ್ರೆ ಮತ್ತೊಂದು ಕಡೆ ಇದೀಗ ನರ ಹಂತಕನ ಭಯ ದಕ್ಷಿಣ ಕೊಡಗಿನಲ್ಲಿ ಶುರುವಾಗಿದೆ. ಕಳೆದ ವರ್ಷ ಕೂಡ ಹುಲಿ ದಾಳಿಯಿಂದ ಹಲವಾರು ಜನ ಜೀವ ಕಳೆದುಕೊಂಡಿದ್ದರು. ಆ ಒಂದು ಘಟನೆ ಜನ ವಲಯದಲ್ಲಿ ಮಾಸುವ ಮುನ್ನವೇ ಇದೀಗ ಮತ್ತೆ ಹುಲಿ ಮನುಷ್ಯನ ಮೇಲೆ ದಾಳಿ ಮಾಡುತ್ತಿರುವುದು ಜನರನ್ನು ಭಯದ ಕೂಪಕ್ಕೆ ತಳ್ಳಿದೆ.
ಈ ಭಾಗದ ಜನರು ಹುಲಿ ಹಿಡಿಯುವಂತೆ ಅರಣ್ಯಾಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ. ವೈದ್ಯರು, ಶಾರ್ಪ್ ಶೂಟರ್ , ಮೂರು ಸಾಕಾನೆಗಳ ಸಹಾಯದಿಂದ ಕಾಫಿ ತೋಟದಲ್ಲಿ ಹುಲಿ ಸೆರೆಗೆ ಕಾರ್ಯಚರಣೆ ನಡೆಯುತ್ತಿದೆ. ಕಾರ್ಯಚರಣೆ ವೇಳೆ ಹುಲಿ ಕಾಣಿಸಿಕೊಂಡಿದ್ದು, ಮತ್ತಷ್ಟು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಹುಲಿಯನ್ನು ಹಿಡಿಯದಿದ್ದಲ್ಲಿ ಮತ್ತಷ್ಟು ಜನರ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ಕಾಡುಪ್ರಾಣಿಗಳ ಹಾವಳಿ: ಕೊಡಗಿನಲ್ಲಿ ಕಾಫಿ ಕಟಾವಿಗೆ ಕಾರ್ಮಿಕರ ಹಿಂದೇಟು