ಕೊಡಗು: ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕಾನೂರು ಸಮೀಪ ಬ್ರಹ್ಮಗಿರಿಯಲ್ಲಿ ನಿನ್ನೆ (ಶನಿವಾರ)ಮಧ್ಯಾಹ್ನ ಹುಲಿಯೊಂದು ಪ್ರತ್ಯಕ್ಷವಾಗಿದೆ. ಇದರಿಂದ ಸುತ್ತಮುತ್ತಲಿನ ಜನರಲ್ಲಿ ಆತಂಕ ಮನೆ ಮಾಡಿದೆ. ರಸ್ತೆ ಬದಿ ಹುಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಹುಲಿ ಪ್ರತ್ಯಕ್ಷವಾಗಿದ್ದು ಅರಣ್ಯ ಇಲಾಖೆ ಪೊನ್ನಂಪೇಟೆ ತಾಲೂಕಿನ ಕಿರಗೂರು ಸಮೀಪ ಕಾರ್ಯಾಚರಣೆ ನಡೆಸುತ್ತಿದೆ. ಇದರ ಬಳಿಕ ಹುಲಿಯೊಂದು ಬ್ರಹ್ಮಗಿರಿ ಪ್ರದೇಶದಲ್ಲಿ ಏಕಾಂಗಿಯಾಗಿ ಓಡಾಡುತ್ತಿದೆ. ಕಾರ್ಮಿಕರು ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ.
ಇದನ್ನೂ ಓದಿ: ಎರಡು ಪ್ರಾಣ ತೆಗೆದಿದ್ದ ಹುಲಿ ಕೊನೆಗೂ ಸೆರೆ: ನಿಟ್ಟುಸಿರು ಬಿಟ್ಟ ಕೊಡಗಿನ ಜನ
ಇಬ್ಬರ ಬಲಿ ಪಡೆದ ಹುಲಿ: ಕೊಡಗು ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆ 24 ಗಂಟೆಗಳ ಅವಧಿಯಲ್ಲೇ ಇಬ್ಬರನ್ನು ಬಲಿ ಪಡೆದಿತ್ತು. ಮನೆ ಮುಂದೆ ಆಟವಾಡುತ್ತಿದ್ದ ಬಾಲಕ ಮತ್ತು ಮೊಮ್ಮಗನ ಶವ ನೋಡಲು ಬಂದ ತಾತನನ್ನು ಹುಲಿ ಕೊಂದು ಹಾಕಿತ್ತು. ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂರಿಕಾಡು ನೆಲ್ಲಿರ ಪೂಣಚ್ಚ ಎಂಬುವವರ ಮನೆಯಲ್ಲಿ ಕೆಲಸ ಮಾಡಲು ಬಾಲಕ ಮತ್ತು ಪೋಷಕರು ತೆರಳಿದ್ದರು. ಸಂಜೆ ಅಂದಾಜು 6-7 ಗಂಟೆಯ ಸುಮಾರಿಗೆ ಕಾಫಿ ತೋಟದ ಮನೆಯ ಮುಂದೆ ಬಾಲಕ ಆಟವಾಡುತ್ತಿದ್ದ. ಈ ವೇಳೆ ಹುಲಿ ದಾಳಿ ಮಾಡಿದೆ. ಘಟನೆಯ ಬಳಿಕ ಹುಲಿ ಸೆರೆಗೆ ಆಗ್ರಹಿಸಿ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ತಕ್ಷಣ ಕಾರ್ಯಾಚರಣೆಗೆ ಮುಂದಾದ ಸಿಬ್ಬಂದಿ, ಹುಲಿಗೆ ಅರವಳಿಕೆ ನೀಡಿ ಸೆರೆ ಹಿಡಿದಿದ್ದರು.
ಇದನ್ನೂ ಓದಿ: ಮನೆ ಮುಂದೆ ಆಟವಾಡುತ್ತಿದ್ದ ಬಾಲಕನ ಎಳೆದೊಯ್ದ ಹುಲಿ.. ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಬೆಚ್ಚಿಬಿದ್ದ ಜನ: ಜಿಲ್ಲೆಯಲ್ಲಿ ವನ್ಯಜೀವಿಗಳ ಹಾವಳಿಯಿಂದ ಬೆಳೆಗಾರರು ಹಾಗೂ ರೈತರು ಕಂಗಾಲಾಗಿದ್ದಾರೆ. ಪ್ರತಿನಿತ್ಯ ಕಾಡಿನಿಂದ ನಾಡಿಗೆ ಲಗ್ಗೆ ಇಡುವ ಪ್ರಾಣಿಗಳಿಂದ ಕೊಡಗಿನ ಬೆಳೆಗಾರರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಒಂದೆಡೆ ಗಜಪಡೆಗಳ ಹಾವಳಿಯಾದ್ರೆ ಮತ್ತೊಂದೆಡೆ ಇದೀಗ ಹುಲಿ ಭಯ ದಕ್ಷಿಣ ಕೊಡಗಿನಲ್ಲಿ ಶುರುವಾಗಿದೆ. ಕಳೆದ ವರ್ಷವೂ ಕೂಡ ಹುಲಿ ದಾಳಿಯಿಂದ ಹಲವು ಜನ ಜೀವ ಕಳೆದುಕೊಂಡಿದ್ದರು.
ಇದನ್ನೂ ಓದಿ: 24 ಗಂಟೆಯೊಳಗೆ ಇಬ್ಬರನ್ನು ಬಲಿ ಪಡೆದ ಹುಲಿ.. ಬೆಚ್ಚಿಬಿದ್ದ ಮಡಿಕೇರಿ ಜನ