ಕೊಡಗು: ಹುಲಿ ದಾಳಿ ಮಾಡಿ ಕರುವನ್ನು ಗಾಯಗೊಳಿಸಿರುವ ಘಟನೆ ಮತ್ತೆ ಜಿಲ್ಲೆಯಲ್ಲಿ ನಡೆದಿದೆ.
ವಿರಾಜಪೇಟೆ ತಾಲೂಕಿನ ಬಾಳೆಲೆ ಸಮೀಪ ಸುಳುಗೋಡುವಿನ ಆದೇಂಗಡ ಧನು ಪೊನ್ನಪ್ಪ ಎಂಬುವರಿಗೆ ಸೇರಿದ ಕರುವಿನ ಮೇಲೆ ನಿನ್ನೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಹುಲಿಯೊಂದು ದಾಳಿ ಮಾಡಿದೆ.
ಸಣ್ಣ-ಪುಟ್ಟ ಗಾಯವಾಗಿದ್ದರೂ ಕರುವಿನ ಮೂಗಿನಲ್ಲಿ ರಕ್ತ ಸುರಿಯಲಾರಂಭಿಸಿದ್ದನ್ನು ಗಮನಿಸಿದ ಬಳಿಕ ಪಶುವೈದ್ಯರಿಂದ ಚಿಕಿತ್ಸೆ ನೀಡಲಾಯಿತು. ಎರಡು ತಿಂಗಳ ಹಿಂದೆ ಮೂರು ಜನರನ್ನು ಬಲಿ ತೆಗೆದುಕೊಂಡು ಹಲವು ಹಸುಗಳನ್ನು ಕೊಂದಿರುವಹುಲಿಯನ್ನು ಅರಣ್ಯ ಇಲಾಖೆ ಬೇಟೆಯಾಡಿತ್ತು. ಇದೀಗ ಮತ್ತೆ ಹುಲಿ ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಹುಲಿ ದಾಳಿ ಮಾಡಿದ ಸ್ಥಳಕ್ಕೆ ನಾಗರಹೊಳೆ ವನ್ಯಜೀವಿ ವಲಯ ಹಾಗೂ ಪೊನ್ನಂಪೇಟೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಆಗಮಿಸಿದ್ದು ಹುಲಿಯ ಸೆರೆಗೆ ಕ್ಯಾಮರಾ ಅಳವಡಿಸಿದ್ದಾರೆ. ಶೀಘ್ರವೇ ಹುಲಿಯನ್ನು ಸೆರೆ ಹಿಡಿಯಲಾಗುವುದು ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಹಾಸನದಲ್ಲಿ 7 ಜನರಿಗೆ ಬ್ಲಾಕ್ ಫಂಗಸ್, ಓರ್ವ ಸಾವು : ಡಿಸಿಎಂ
ಕಳೆದ ಮಾರ್ಚ್ ತಿಂಗಳಲ್ಲಿ ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದ ಲಕ್ಕುಂದದಲ್ಲಿ ಹುಲಿ ದಾಳಿಗೆ ಇಬ್ಬರು ಬಲಿಯಾಗಿದ್ದರು. ಬಳಿಕ ಅರಣ್ಯ ಇಲಾಖೆ ಕೂಂಬಿಂಗ್ ನಡೆಸಿತ್ತು.