ಕೊಡಗು: ತೆಂಗಿನಕಾಯಿ ಕೀಳುತ್ತಿದ್ದ ವೇಳೆ ಮರವೇರಲು ಬಳಸಿದ್ದ ಕಬ್ಬಿಣದ ಏಣಿ ವಿದ್ಯುತ್ ತಂತಿಗೆ ತಗುಲಿ ಮೂವರು ಮೃತಪಟ್ಟ ಘಟನೆ ಗೋಣಿಕೊಪ್ಪಲು ಬಳಿ ಅರ್ವತೋಕ್ಲು ಗ್ರಾಮದಲ್ಲಿ ನಡೆದಿದೆ.
ಅರ್ವತೋಕ್ಲು ಗ್ರಾಮದ ರಾಮಜಮ್ಮ ಎಂಬುವವರ ತೋಟದಲ್ಲಿ ತೆಂಗಿನಕಾಯಿ ಕೀಳುವುದಕ್ಕೆ ಕಬ್ಬಿಣದ ಏಣಿಯನ್ನು ಬಳಸಲಾಗಿತ್ತು. ಈ ವೇಳೆ ಏಣಿ ವಿದ್ಯುತ್ ತಂತಿಗೆ ತಗುಲಿ ಧರ್ಮಜ (50) , ರವಿ (40), ಸತೀಶ್ (50) ಮೃತ ಪಟ್ಟಿದ್ದಾರೆ. ಮೃತದೇಹ ಸಂಪೂರ್ಣ ಸುಟ್ಟು ಕರಕಲಾಗಿವೆ.
ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮೂವರು ಮೃತಪಟ್ಟಿದ್ದು, ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿದ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಮೃತರ ಸಂಬಂಧಿಕರು ಪರಿಹಾರ ನೀಡುವಂತೆ ತೋಟದ ಮಾಲೀಕರಲ್ಲಿ ಒತ್ತಾಯಿಸಿದ್ದಾರೆ. ಘಟನೆ ಸಂಬಂಧ ಗೋಣಿಕೊಪ್ಪಲು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.