ಕೊಡಗು: ವಿಶ್ವದೆಲ್ಲೆಡೆ ಹಬ್ಬುತ್ತಿರುವ ಕೊರೊನಾ ವೈರಸ್ ಗೆ ಬ್ರೇಕ್ ಹಾಕೋದಕ್ಕೆ ರಾಜ್ಯ ಸರ್ಕಾರ ರಾಜ್ಯದಲ್ಲಿಯೇ ವಾರಗಳ ಕಾಲ ಜಾತ್ರೆ, ಉತ್ಸವ ಮುಂತಾದವುಗಳಿಗೆ ನಿಷೇಧ ಹೇರಿದೆ. ಆದರೆ ಮಡಿಕೇರಿ ತಾಲ್ಲೂಕಿನ ಮಲೆತಿರಿಕೆ ಬೆಟ್ಟದಲ್ಲಿ ಸಾವಿರಾರು ಜನರು ಒಂದೆಡೆ ಸೇರಿ ಜಾತ್ರೆ ಆಚರಿಸಿದ್ದಾರೆ.
ಬೆಟ್ಟದ ಮೇಲಿರುವ ಶಿವನ ದೇವಾಲಯದಲ್ಲಿ ನಡೆಯುವ ಈ ಜಾತ್ರೆಗೆ ಸುತ್ತಮುತ್ತಲ 12 ಹಳ್ಳಿಗಳಿಂದ ಎರಡು ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಒಂದೆಡೆ ಸರ್ಕಾರ ಕೊರೊನಾ ವೈರಸ್ ಅನ್ನು ನಿಯಂತ್ರಿಸುವುದಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೆ, ಇಲ್ಲಿ ಮಾತ್ರ ಜಾತ್ರೆ ನಡೆಸಲಾಗುತ್ತಿದೆ. ಪ್ರತಿ ವರ್ಷ ಮಾರ್ಚ್ 14 ರಂದು ಈ ಜಾತ್ರೆ ನಡೆಯುತ್ತಾ ಬಂದಿದ್ದು, ಅದೇ ರೀತಿ ಈ ಬಾರಿಯೂ ಜಾತ್ರೆ ನಡೆಯುತ್ತಿದೆ. ಇದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಆದ್ರೆ ಜನರು ಮಾತ್ರ ಇಲ್ಲಿಗೆ ಯಾರೂ ಹೊರರಾಜ್ಯ ಅಥವಾ ಹೊರ ದೇಶದವರು ಬರುವುದಿಲ್ಲ. ಆದ್ದರಿಂದ ನಮಗೆ ಕೊರೊನಾ ಹರಡುತ್ತದೆ ಎಂಬ ಆತಂಕವಿಲ್ಲ ಎನ್ನುತ್ತಿದ್ದಾರೆ.