ಕೊಡಗು : ಜಿಲ್ಲೆಯಲ್ಲಿ ಮೂರನೇ ಬಾರಿಗೆ ಭೂಮಿ ನಡುಗಿದ್ದು ಜಿಲ್ಲೆಯ ಜನತೆ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ಎರಡು ದಿನ ಅಂದ್ರೆ ಜೂನ್ 23ನೇ ತಾರೀಖಿನಂದು ಜಿಲ್ಲೆಯ ಕೊಡಗು, ಹಾಸನ ಗಡಿಭಾಗದಲ್ಲಿ ಹಾಗೂ ಸೋಮವಾರಪೇಟೆಯ ನೇಗಳೆ, ರೆಂಜರ್ ಬ್ಲಾಕ್ನಲ್ಲಿ ಭೂಕಂಪನವಾಗಿತ್ತು. ಎರಡು ದಿನ ಬಿಟ್ಟು ಮುಂಜಾನೆ 9.15ರ ಸುಮಾರಿಗೆ ಜಿಲ್ಲೆಯ ಕರಿಕೆ, ಪೆರಾಜೆ, ಸಂಪಾಜೆ, ಸುತ್ತಮುತ್ತ ಭೂಮಿ ಕಂಪಿಸಿತ್ತು. 3.0 ತೀವ್ರತೆ ಪ್ರಮಾಣದಲ್ಲಿ ಭೂಮಿ ಕಂಪಿಸಿರುವುದು ಕಂಡು ಬಂದಿದೆ.
ಈ ಒಂದು ಘಟನೆ ಮಾಸುವ ಮುನ್ನವೆ ಕೊಡಗಿನಲ್ಲಿಈಗ ಮೂರು ದಿನ ಬಿಟ್ಟು ಮೂರನೇ ಬಾರಿಗೆ ಭೂಮಿ ನಡುಗಿದೆ. ಭಾಗಮಂಡಲ ಕರಿಕೆ, ಪೆರಾಜೆ, ಮಡಿಕೇರಿ, ನಾಪೋಕ್ಲು ಸೇರಿದಂತೆ ಜಿಲ್ಲೆಯ ಹಲವೆಡೆ ಭೂಕಂಪನವಾಗಿದೆ. 7.45ರ ಸುಮಾರಿಗೆ 3.4 ಸೆಕೆಂಡ್ ಭೂ ಕಂಪನದ ಅನುಭವವಾಗಿದೆ. ಇದು ಜಿಲ್ಲೆಯ ಜನತೆಯನ್ನ ಬೆಚ್ಚಿ ಬೀಳಿಸಿದೆ.
ಭೂಮಿನಡುಗಿದ ಶಬ್ದಕ್ಕೆ ಮನೆಯ ಮುಂದೆ ಮಲಗಿದ್ದ ನಾಯಿಯೊಂದು ಬೆಚ್ಚಿಬಿದ್ದು ಎದ್ದು ಓಡಿದೆ. ಭೂಮಿಯ ನಡುಕಕ್ಕೆ ಮನೆಯ ಮುಂದೆ ಇದ್ದ ಮರಗಳ ಎಲೆಗಳು ಮತ್ತು ಕಸ ಕೆಳಗೆ ಬೀಳುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶಬ್ದಕ್ಕೆ ಮನೆಯಲ್ಲಿ ಇದ್ದ ವಸ್ತುಗಳು ಅಲುಗಾಡಿದ ಅನುಭವವಾಗಿದೆ. ಕೆಲ ಹೊತ್ತು ನಡುಗಿದ ಶಬ್ದಕ್ಕೆ ನಾವು ಮನೆಯಿಂದ ಹೊರ ಬಂದಿದ್ದೇವೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಮೂರನೇ ಬಾರಿಗೆ ಭೂಮಿ ನಡುಗಿದೆ. ಮಳೆಗಾಲದಲ್ಲಿ ಮಳೆ ನೀರಿನಿಂದ ಜಲ ಪ್ರಳಯವಾಗುತ್ತಿತ್ತು, ಅನಾಹುತಗಳು ಹೆಚ್ಚು ಸಂಭವಿಸುತ್ತಿರಲಿಲ್ಲ. ಆದ್ರೆ, ಈಗ ಭೂಮಿ ಕಂಪನವಾಗುತ್ತಿದ್ದು, ಭೂ ಕುಸಿತವಾದ್ರೆ ಹಲವರು ಪ್ರಾಣ ಕಳೆದುಕೊಳ್ಳುವ ಜೊತೆ ಕಾಫಿ ತೋಟಗಳು ಕೂಡ ಮಣ್ಣಿನಲ್ಲಿ ಮುಚ್ಚಿ ಹೋಗುತ್ತವೆ. ಒಂದು ಕಡೆ ಜಲ ಪ್ರಳಯದ ಆತಂಕ, ಇನ್ನೊಂದು ಕಡೆ ಭೂ ಕಂಪನದ ಭಯ ಶುರುವಾಗಿದೆ ಅಂತಾರೆ ಸ್ಥಳೀಯರು.
ಜಿಲ್ಲೆಯಲ್ಲಿ 2018ರಲ್ಲೂ ಕೂಡ ಬೆಟ್ಟ-ಗುಡ್ಡಗಳು ಕುಸಿತಕ್ಕೂ ಮೊದಲೇ ಕೊಡಗಿನ ಬಹುತೇಕ ಭಾಗದಲ್ಲೂ ಭೂಮಿ ಕಂಪಿಸಿತ್ತು. ಅದಾದ ಕೆಲವೇ ದಿನಗಳಲ್ಲಿ ಜಲ ಪ್ರಳಯವಾಗಿ ಬೆಟ್ಟ-ಗುಡ್ಡಗಳು ಕುಸಿದು ಹಲವರು ಪ್ರಾಣ ಕಳೆದುಕೊಂಡ್ರೆ, ಕೆಲವರ ಮೃತದೇಹಗಳು ಮಣ್ಣಿನಡಿಯಲ್ಲಿ ಸಿಲುಕಿ ಮೃತ ದೇಹಗಳು ಪತ್ತೆಯಾಗಲಿಲ್ಲ.
ಆತಂಕದ ಛಾಯೆ : ಕೆಲವು ಭಾಗದಲ್ಲಿ ರಸ್ತೆಗಳು ಕಾಫಿ ತೋಟಗಳು ಕೊಚ್ಚಿ ಹೋಗಿ, ಮನೆ-ಮಠ ಕಳೆದುಕೊಂಡು ಬೀದಿಪಾಲಾಗಿದ್ರು. ಇಂತಹ ಕರಾಳ ದಿನಗಳು ಮಾಸುವ ಮುನ್ನವೆ ಜಿಲ್ಲೆಯಲ್ಲಿ ಮತ್ತೆ ಮಳೆಗಾಲಕ್ಕೂ ಮೊದಲೇ ಭೂಮಿ ಮೂರನೇ ಬಾರಿಗೆ ಕಂಪಿಸಿರುವುದು ಜಿಲ್ಲೆಯ ಜನತೆಯನ್ನ ಮತ್ತೆ ಬೆಚ್ಚಿ ಬೀಳುವಂತೆ ಮಾಡಿದೆ. ಈ ಬಾರಿ ಕೂಡ ಬೆಟ್ಟ-ಗುಡ್ಡ ವ್ಯಾಪ್ತಿಯಲ್ಲೆ ಭೂಮಿ ಕಂಪಿಸಿದೆ. ಬೆಟ್ಟ-ಗುಡ್ಡದ ನಿವಾಸಿಗಳಲ್ಲಿ ಆತಂಕದ ಛಾಯೆ ಮನೆ ಮಾಡುವಂತೆ ಮಾಡಿದೆ. ಹೀಗಾಗಿ, ಜನತೆ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.
ಜೀವ ಭಯದಲ್ಲಿ ಬದುಕುವಂತಹ ಸ್ಥಿತಿ : ಭೂಮಿ ಮೂರನೇ ಬಾರಿಗೆ ಕಂಪಿಸಿದ್ದು, ಅಪಾಯದ ಮುನ್ಸೂಚನೆ ತೋರುತ್ತಿದೆ. ಜಿಲ್ಲಾಡಳಿತ ಈ ಮೊದಲೇ 43 ಕಡೆ ಜಲಾವೃತ ಪ್ರದೇಶ ಮತ್ತು 39 ಕಡೆ ಗುಡ್ಡ ಕುಸಿತದ ಪ್ರದೇಶಗಳನ್ನು ಗುರುತು ಮಾಡಿದ್ದು, ಮುಂಜಾಗ್ರತಾ ಕ್ರಮವಾಗಿ ಅಪಾಯದ ಸ್ಥಳದಲ್ಲಿ ವಾಸ ಮಾಡುವ ಜನರಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ನೋಟಿಸ್ ಜಾರಿ ಮಾಡಿದೆ. ಎನ್ಡಿಆರ್ಎಫ್ ತಂಡ ಜಿಲ್ಲೆಯಲ್ಲಿ ಬೀಡುಬಿಟ್ಟಿದೆ. ಇಷ್ಟೆಲ್ಲ ಅವಾಂತರದ ನಡುವೆ ಜಿಲ್ಲೆಯ ಜನರು ಮಾತ್ರ ಭೂ ಕಂಪನದಿಂದ ಜೀವ ಭಯದಲ್ಲಿ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ.
ಓದಿ : ತನ್ನ ನಿವೇಶನಕ್ಕೆ ಸೇರಿದ್ದೆಂದು ರಸ್ತೆಗೇ ಬೇಲಿ ಹಾಕುವುದೇ? ಮಾಲೀಕನ ವಿರುದ್ಧ ಜನರ ಆಕ್ರೋಶ