ಮಡಿಕೇರಿ : ನಾಲ್ಕು ದಿನಗಳ ಹಿಂದೆ ಕಣ್ಮರೆಯಾಗಿದ್ದ ವೃದ್ಧ ಮಹಿಳೆಯನ್ನು ಗ್ರಾಮಸ್ಥರು ಪತ್ತೆ ಹಚ್ಚಿರುವ ಘಟನೆ ನಡೆದಿದೆ. ಅಚ್ಚರಿ ಎಂದರೆ ನಾಲ್ಕು ದಿನಗಳ ಕಾಲ ವೃದ್ಧೆ ಚಳಿ, ಮಳೆಗೆ ಬೆಟ್ಟದ ಪೊದೆಯೊಂದರ ಬಳಿ ಬಂಧಿ ಆಗಿದ್ದು, ಇವರ ಜೀವ ಉಳಿದಿದ್ದೇ ಗ್ರಾಮಸ್ಥರಿಗೆ ವಿಸ್ಮಯ ಮೂಡಿಸಿದೆ.
ಕಳೆದ ಬುಧವಾರ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮ೦ಜಾಟ್ ಕಾಲೋನಿಯ ನಿವಾಸಿ ಸೀತಮ್ಮ(80) ಸ೦ಬಂಧಿಕರ ಮನೆಯಿಂದ ತಮ್ಮ ಮನೆಗೆ ಹೊರಟಿದ್ದರು. ಈ ಸಂದರ್ಭ ದಾರಿ ತಪ್ಪಿದ್ದು, ಮನೆಗೆ ವಾಪಸ್ ಆಗಿರಲಿಲ್ಲ. ನಾಲ್ಕು ದಿನಗಳಾದರೂ ಮನೆಗೆ ಬಾರದ ವೃದ್ಧೆಯನ್ನು ಸಂಬಂಧಿಕರು ಹಾಗೂ ಗ್ರಾಮಸ್ಥರು ಸೇರಿ ಸುತ್ತಮುತ್ತಲಿನ ಕಾಡಿನಲ್ಲಿ ಹುಡುಕಾಟ ನಡೆಸಿದ್ದರು. ಆದರೂ ಸೀತಮ್ಮ ಪತ್ತೆಯಾಗಿರಲಿಲ್ಲ.
ಆದರೆ, ಭಾನುವಾರ ಮತ್ತೆ ಗ್ರಾಮಸ್ಥರೆಲ್ಲ ಸೇರಿಕೊಂಡು ಹುಡುಕಾಟ ನಡೆಸಿದಾಗ ಮನೆಯಿ೦ದ ಸುಮಾರು 2 ಕಿ.ಮೀ. ದೂರದಲ್ಲಿದ್ದ ಬೆಟ್ಟದ ಪೊದೆಯಲ್ಲಿ ವೃದ್ಧೆ ಸೀತಮ್ಮ ಪತ್ತೆಯಾಗಿದ್ದಾರೆ. ಅವರನ್ನು ಮನೆಗೆ ಕೆರದುಕೊಂಡು ಬಂದು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ನಾಪೋಕ್ಲುಗೆ ಕರೆದುಕೊಂಡು ಬಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ವೃದ್ಧೆ ಚೇತರಿಸಿಕೊಳ್ಳುತ್ತಿರುವುದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಓದಿ : 'ಸಿಎಂ ಸಿದ್ದರಾಮಯ್ಯ ಬಾಸ್': ಚಿನ್ನದಿಂದ ಬರೆದ ಫಲಕ ಗಿಫ್ಟ್ ನೀಡಿದ ಅಭಿಮಾನಿ