ತಲಕಾವೇರಿ (ಕೊಡಗು): ಬ್ರಹ್ಮಗಿರಿ ಗುಡ್ಡ ಕುಸಿತದ ಕಾರ್ಯಾಚರಣೆ ವೇಳೆ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಮೃತದೇಹ ಪತ್ತೆಯಾಗಿದ್ದು, ಕಣ್ಮರೆಯಾಗಿದ್ದ ಐವರ ಪೈಕಿ ಇಬ್ಬರ ಮೃತದೇಹಗಳು ಪತ್ತೆಯಾದಂತಾಗಿದೆ.
ದುರ್ಘಟನೆ ನಡೆದ ಸ್ಥಳದಿಂದ ಸುಮಾರು ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಆಚಾರ್ ಮೃತದೇಹ ಕೆಸರಿನಲ್ಲಿ ಕಲ್ಲು, ಬಂಡೆಗಳ ಮಧ್ಯೆ ದೊರೆತಿದೆ. ಬ್ರಹ್ಮಗಿರಿ ಬೆಟ್ಟ ಕುಸಿದು ನಾಲ್ಕು ದಿನಗಳಾದ ಬಳಿಕ ಮೂರು ದಿನಗಳ ಹಿಂದಷ್ಟೇ ಕಣ್ಮರೆಯಾಗಿದ್ದ ಐವರಲ್ಲಿ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಅಣ್ಣ ಆನಂದ ತೀರ್ಥ ಸ್ವಾಮೀಜಿ ಅವರ ಮೃತದೇಹ ಪತ್ತೆಯಾಗಿತ್ತು.
ಸುರಿಯುತ್ತಿರುವ ಮಳೆಯಲ್ಲಿ ರಕ್ಷಣಾ ಸಿಬ್ಬಂದಿ ಕೆಸರು ಗದ್ದೆಯಂತಿರುವ ಪ್ರದೇಶದಲ್ಲಿ ಇನ್ನುಳಿದ ಮೂವರ ಪತ್ತೆಗೆ ಶೋಧ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಮೃತದೇಹ ಕೊಳೆತ ಹಾಗೂ ಮಣ್ಣು ಮಿಶ್ರಿತವಾಗಿರುವುದರಿಂದ ಮೊದಲಿಗೆ ಶವ ಪತ್ತೆ ಹಚ್ಚಲು ಕಷ್ಟವಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ಮೃತದೇಹ ವೀಕ್ಷಿಸಿದ ಬಳಿಕ ಅದನ್ನು ಮರಣೋತ್ತರ ಪರೀಕ್ಷೆಗೆ ಮಡಿಕೇರಿಗೆ ಸಾಗಿಸಲಾಗಿದೆ.