ಮಡಿಕೇರಿ: ಗುಂಡಿ ಬಿದ್ದಿರುವ ಮಡಿಕೇರಿ ನಗರದ ರಸ್ತೆಗಳ ದುರಸ್ಥಿ ಕಾರ್ಯದ ಬಗ್ಗೆ ಮಕ್ಕಳು ನಗರಸಭಾ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಕಾಮಗಾರಿಯನ್ನು ತಕ್ಷಣ ಆರಂಭಿಸುವಂತೆ ಒತ್ತಾಯಿಸಿದರು. ಮಕ್ಕಳ ಮನವಿಗೆ ಮಣಿದ ಪೌರಾಯುಕ್ತ ರಮೇಶ್, ಗೌಳಿಬೀದಿ ರಸ್ತೆ ಪರಿಶೀಲಿಸಿ ಮುಂದಿನ 15 ದಿನದೊಳಗೆ ದುರಸ್ಥಿ ಕಾರ್ಯ ಕೈಗೊಳ್ಳುವ ಭರವಸೆ ನೀಡಿದರು.
ವಿವಿಧ ಸಂಘ, ಸಂಸ್ಥೆಗಳು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರೂ ಅಧಿಕಾರಗಳು ಕ್ಯಾರೇ ಅಂದಿರಲಿಲ್ಲ. ಇದರಿಂದಾಗಿ ಗೌಳಿ ಬೀದಿಯ ವಿದ್ಯಾರ್ಥಿಗಳು ಸ್ವತಃ ತಾವೇ ಅಧಿಕಾರಿಗಳನ್ನು ಎಚ್ಚರಿಸುವ ಕಾರ್ಯಕ್ಕೆ ಇಂದು ಮುಂದಾದರು. ಪೌರಾಯುಕ್ತರ ಕಚೇರಿಗೆ ತೆರಳಿದ 10ಕ್ಕೂ ಹೆಚ್ಚಿನ ಸಂಖ್ಯೆ ವಿದ್ಯಾರ್ಥಿಗಳು ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿ ಗೌಳಿಬೀದಿಯ ಕಲ್ಪವೃಕ್ಷ ಕಟ್ಟಡ ವ್ಯಾಪ್ತಿಯ ಒಳ ರಸ್ತೆಯನ್ನು ದುರಸ್ಥಿ ಪಡಿಸುವಂತೆ ಒತ್ತಾಯಿಸಿದರು. ಸ್ಥಳ ಪರಿಶೀಲನೆ ನಡೆಸುವಂತೆ ಮನವಿ ಮಾಡಿದರು.
ಮಕ್ಕಳ ಮನವಿಗೆ ಮಣಿದ ಪೌರಾಯುಕ್ತ ರಮೇಶ್ ಅವರು, ಇತರ ಅಧಿಕಾರಿಗಳೊಂದಿಗೆ ತೆರಳಿ ಹದಗೆಟ್ಟ ರಸ್ತೆ ಪರಿಶೀಲಿಸಿದರು. ಮುಂದಿನ ಹದಿನೈದು ದಿನಗಳೊಳಗೆ ದುರಸ್ಥಿ ಕಾರ್ಯ ಕೈಗೊಳ್ಳುವ ಭರವಸೆ ನೀಡಿದರು.