ಕೊಡಗು: ಜಿಲ್ಲೆಯಲ್ಲಿ ವಿಪರೀತ ಮಳೆಗೆ ಜನತೆ ನಲುಗಿ ಹೋಗಿದ್ದು, ಮಳೆ ನಿಂತ ಮೇಲೂ ಮತ್ತೆ ಅಪಾಯದ ಮುನ್ಸೂಚನೆ ಗೋಚರಿಸುತ್ತಿದೆ. ವಿರಾಜಪೇಟೆ ತಾಲೂಕಿನ ಅಯ್ಯಪ್ಪ ದೇವಾಲಯದ ಬೆಟ್ಟದಲ್ಲಿ ಬಿರುಕು ಕಂಡಿದ್ದು, ನಗರದ ನಿವಾಸಿಗಳಿಗೆ ಭೀತಿ ಎದುರಾಗಿದೆ.
ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ಮಳೆ ಕೊಂಚ ಬಿಡುವು ನೀಡಿದೆ. ಮಳೆ ಆರ್ಭಟಕ್ಕೆ ನಲುಗಿ ಹೋಗಿದ್ದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಈಗಾಗಲೇ ಧಾರಕಾರ ಮಳೆಗೆ ಪ್ರಾಣ ಹಾನಿ ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ. ವಿರಾಜಪೇಟೆ ತಾಲೂಕಿನ ಅಯ್ಯಪ್ಪ ದೇವಾಲಯದ ಬಳಿ ಇರುವ ಬೆಟ್ಟದಲ್ಲಿ ಸುಮಾರು 20 ಮೀಟರ್ ಬಿರುಕು ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಅಯ್ಯಪ್ಪ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈಗಾಗಲೇ ಆ ವ್ಯಾಪ್ತಿಯಲ್ಲಿ ನೆಲೆಸಿದ್ದ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದೇವೆ. ಬಿರುಕು ಕಾಣಿಸಿಕೊಂಡಿರುವ ಜಾಗಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ನಿರಂತರ ಮಳೆ ಆಗುತ್ತಿದ್ದರೆ ಮಾತ್ರ ಅಪಾಯ ಎಂದು ತಿಳಿದಿದ್ದಾರೆ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಸದಸ್ಯ ರಾಜೇಶ್.
ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಮಳೆ ನಿಂತ ಮೇಲೂ ಗುಡ್ಡ ಕುಸಿಯುವ ಆತಂಕದ ಜೊತೆಗೆ ಕಳ್ಳರ ಕೈಚಳಕದಿಂದ ಜನತೆ ರೋಸಿ ಹೋಗಿದ್ದು, ಮಳೆ ತಂದ ಅವಾಂತರಕ್ಕೆ ಜನತೆ ಕಂಗಾಲಾಗಿದ್ದಾರೆ. ಹಾಗೂ ಜಿಲ್ಲಾಡಳಿತ ಮುಂಜಾಗೃತ ದೃಷ್ಟಿಯಿಂದ ರೆಡ್ ಅಲರ್ಟ್ ಮುಂದುವರೆಸಿದೆ.