ಕೊಡಗು : ಈತ ವಿಶೇಷ ಚೇತನನಾದರೂ ಪ್ರತಿಭೆಗೆ ಮಾತ್ರ ಕೊರತೆ ಏನೂ ಇಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದಾನೆ ಈ ಯುವಕ. ಆದರೆ ತೀವ್ರ ಆರ್ಥಿಕ ಸಂಕಷ್ಟವಿರುವುದರಿಂದ ಚಿಕ್ಕಪುಟ್ಟ ಕೆಲಸಗಳನ್ನು ಮಾಡುತ್ತಾ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾನೆ. ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೆ ಹೋಗಲು ಆರ್ಥಿಕ ಸಹಾಯ ದೊರೆಯುವುದೇ ಎನ್ನುವ ನಿರೀಕ್ಷೆಯಲ್ಲಿದ್ದಾನೆ.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪದ ನಿವಾಸಿ ಇಸ್ಮಾಯಿಲ್ ಮತ್ತು ಝಮೀಲಾ ದಂಪತಿಯ ಮಗ ಝಂಷಾದ್. ಈ ಯುವಕ ತನ್ನ ಬಲಗೈ ಸ್ವಾಧೀನ ಇಲ್ಲದಿದ್ದರೂ ಪರಿಶ್ರಮದಿಂದಲೇ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿದ್ದಾನೆ. ಪ್ಯಾರಾಲಿಂಪಿಕ್ ಬ್ಯಾಡ್ಮಿಂಟನ್ನಲ್ಲಿ ಮೂರು ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಿ ಕ್ವಾರ್ಟರ್ ಫೈನಲ್ವರೆಗೆ ಆಡಿದ್ದಾನೆ. ರಾಜ್ಯಮಟ್ಟದ ಮ್ಯಾಚ್ನಲ್ಲಿ ಗೋಲ್ಡ್ ಮೆಡಲ್ ಪಡೆದು ರಾಷ್ಟ್ರಮಟ್ಟದಲ್ಲೂ ಹಲವು ಪಂದ್ಯಾವಳಿಗಳಲ್ಲಿ ವಿವಿಧ ಮೆಡಲ್ಗಳಿಗೆ ಕೊರಳೊಡ್ಡಿದ್ದಾನೆ.
ವಿಕಲಚೇತನನಾಗಿರುವ ಝಂಷದ್ ಮಡಿಕೇರಿ ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾನೆ. ಜೊತೆಗೆ ಸಂಜೆ ಮಡಿಕೇರಿಯ ರಾಜಶೀಟ್ ಬಳಿ ಪಾಪ್ಕಾರ್ನ್, ಸ್ವೀಟ್ಕಾರ್ನ್ಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಸಂಸಾರವನ್ನೂ ನಿಭಾಯಿಸಿಕೊಂಡು, ಅಂತಾರಾಷ್ಟ್ರೀಯ ಮಟ್ಟದ ಮ್ಯಾಚ್ಗಳನ್ನು ಆಡುವಂತಾಗಿದೆ. ಹೀಗಾಗಿ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದಾನೆ ಝಂಷಾದ್.
ಕ್ರೀಡೆಯಲ್ಲಿ ತಾನು ಏನಾದರೂ ಸಾಧನೆ ಮಾಡಬೇಕೆಂಬ ಮಹದಾಸೆ ಹೊಂದಿರುವ ಯುವಕ ಅದಕ್ಕಾಗಿ ಸಾಕಷ್ಟು ಪರಿಶ್ರಮ ಹಾಕಿ ತರಬೇತಿ ಮಾಡುತ್ತಿದ್ದಾನೆ. ಬೆಳಿಗ್ಗೆ ಬ್ಯಾಡ್ಮಿಂಟನ್ ತರಬೇತಿ ಮುಗಿಸಿ, ಬಳಿಕ ಜಿಮ್ ತರಬೇತಿ ಪಡೆಯುತ್ತಾನೆ. ಈತನ ಪ್ರತಿಭೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಎಲ್ಲಾ ಸಾಮರ್ಥ್ಯವೂ ಇದೆ. ಆದರೆ ತರಬೇತಿಗೆ ತಕ್ಕಂತೆ ಪೌಷ್ಟಿಕಾಂಶಯುಕ್ತ ಆಹಾರ ಪಡೆಯಲು ಕೂಡ ಹಣದ ಕೊರತೆ ಇದೆ. ಸಹಾಯ ದೊರೆತಲ್ಲಿ ದೇಶಕ್ಕೆ ಕೀರ್ತಿ ತರುವಂತಹ ಪ್ರತಿಭೆ ಈತನದು. ಹೀಗಾಗಿ ಯಾರಾದರೂ ಆರ್ಥಿಕ ಸಹಾಯ ಮಾಡಿದರೆ ದೊಡ್ಡ ಪ್ರತಿಭೆಗೆ ನೀರೆರೆದಂತಾಗುತ್ತದೆ.