ಕೊಡಗು: ಕೆಸರು ಮತ್ತು ಮರದ ಕೊಂಬೆಗಳ ಕೆಳಗೆ ಪ್ರಾಣ ಭೀತಿಯಲ್ಲಿ ಸಿಲುಕಿ ನರಳುತ್ತಿರೊ ಸಂತ್ರಸ್ತರು..! ರಕ್ಷಣಾ ಸಿಬ್ಬಂದಿಯಿಂದ ನೆರವಿನ ಹಸ್ತ ಬಯಸುತ್ತಿರೊ ಜನತೆ..! ಇದರ ನಡುವೆ ಸಮರೋಪಾದಿಯಲ್ಲಿ ಪ್ರಕೃತಿ ಮುನಿಸಿಗೆ ಸವಾಲೊಡ್ಡಿ ರಕ್ಷಣೆಗೆ ಧಾವಿಸುತ್ತಿರೊ ಸಿಬ್ಬಂದಿ...! ಹೌದು, ಇಂತಹದ್ದೊಂದ್ದು ಸನ್ನಿವೇಶವನ್ನು ನಿಭಾಯಿಸಲು ನಾವು ಸನ್ನದ್ಧವೆಂದು ಅಣಕು ಪ್ರದರ್ಶನದ ಮೂಲಕ ಪ್ರಕೃತಿಗೆ ಸವಾಲೊಡ್ಡಿದೆ ಜಿಲ್ಲಾಡಳಿತ.
ಪ್ರಾಣಾಪಾಯಕ್ಕೆ ಸಿಲುಕಿ ಸಾವು-ಬದುಕಿನ ನಡುವೆ ಹೋರಾಡುತ್ತಿರೊ ಜನತೆ. ಪ್ರಾಣ ಭೀತಿಯನ್ನೇ ತೊರೆದು ಸಾರ್ವಜನಿಕರ ರಕ್ಷಣೆಗೆ ಟೊಂಕಕಟ್ಟಿ ಧಾವಿಸುತ್ತಿರೊ ರಕ್ಷಣಾ ಸಿಬ್ಬಂದಿ. ಮತ್ತೊಂದೆಡೆ ಅಗತ್ಯ ವೈದ್ಯಕೀಯ ಸೇವೆ ನೀಡುತ್ತಿರೊ ವೈದ್ಯರು. ಇವೆಲ್ಲಾ ದೃಶ್ಯಗಳು ಕಂಡುಬಂದಿದ್ದು ಬೇರೆಲ್ಲೂ ಅಲ್ಲ. ಕಳೆದ ಬಾರಿ ಮಹಾಮಳೆಯ ಅವಾಂತರಕ್ಕೆ ನಲುಗಿದ ಕೊಡಗು ಜಿಲ್ಲೆಯಲ್ಲಿ.
ಹೌದು, ಕೊಡಗು ಜಿಲ್ಲಾ ಕೇಂದ್ರದಿಂದ ಅಣತಿ ದೂರದಲ್ಲಿರುವ ಹೆಬ್ಬೆಟ್ಟಗೇರಿಯಲ್ಲಿ ಉಂಟಾಗಿದ್ದ ಭೂ ಕುಸಿತದ ಸ್ಥಳದಲ್ಲಿ ಜಿಲ್ಲಾಡಳಿತದಿಂದ ಮುಂಗಾರು ಪ್ರಾರಂಭಕ್ಕೂ ಮೊದಲು ಪ್ರಾತ್ಯಕ್ಷಿಕೆ ಹಮ್ಮಿಕೊಂಡಿತ್ತು. ಕಳೆದ ಬಾರಿ ಸುರಿದ ವರ್ಷಾಧಾರೆಗೆ ಕೊಡಗಿನ ಹಲವೆಡೆ ಜಲಪ್ರಳೆಯವೇ ಸೃಷ್ಟಿಯಾಗಿತ್ತು. ಭೂಕುಸಿತ ಉಂಟಾಗಿ ಸಾವಿರಾರು ಮಂದಿ ನಿರ್ಗತಿಕರಾಗಿದ್ದರು. ಪ್ರಾಣಹಾನಿ ಜೊತೆಗೆ ಆಸ್ತಿ-ಮನೆಗಳನ್ನು ಕಳೆದುಕೊಂಡಿದ್ದರು. ಈ ಹಿನ್ನೆಲೆ ಮಳೆ ಪ್ರಾರಂಭಕ್ಕೂ ಮೊದಲೇ, ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಆರ್ಎಫ್, ಎನ್ಡಿಆರ್ಎಫ್ ತಂಡ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಘಟನಾ ಸ್ಥಳದಲ್ಲೇ ಪ್ರವಾಹ ನಿರ್ವಹಣೆಯ ಅಣಕು ಪ್ರದರ್ಶನ ನಡೆಸಿದರು.
ಪ್ರವಾಹ ಅಥವಾ ಭೂಕುಸಿತ ಸಂಭವಿಸಿದ ಕೃತಕ ಸನ್ನಿವೇಶ ಸೃಷ್ಟಿಸಿದ ತಂಡಗಳು, ಸಂಕಷ್ಟಕ್ಕೆ ಸಿಲುಕಿದವರನ್ನು ಹೇಗೆ ರಕ್ಷಿಸಬೇಕು. ರಕ್ಷಣೆಗೆ ಏನೆಲ್ಲಾ ಸಲಕರಣೆಗಳನ್ನು ಬಳಸಬೇಕು. ರಕ್ಷಣೆಗೆ ಅನುಸರಿಸಬೇಕಾದ ಕ್ರಮಗಳು. ಹಾಗೆಯೇ ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಸೇವೆ ಒದಗಿಸುವ ಪ್ರಾತ್ಯಕ್ಷಿಕೆ ನಡೆಸಿ, ಜಿಲ್ಲಾಡಳಿತ ಗುರುತಿಸಿರುವ ಅತಿ ಸೂಕ್ಷ್ಮ ಪ್ರದೇಶಗಳ ಜನತೆಗೆ ಧೈರ್ಯ ತುಂಬುವ ಕೆಲಸವನ್ನು ಇಲ್ಲಿ ಮಾಡಲಾಗುತ್ತಿದೆ.
ಕಳೆದ ಬಾರಿ ಅತಿವೃಷ್ಠಿಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು. ಜೂನ್ 6 ರಂದು ಜಿಲ್ಲೆಗೆ ಮುಂಗಾರು ಆಗಮಿಸುವ ನಿರೀಕ್ಷೆ ಇದೆ. ಕಳೆದ ಒಂದೂವರೆ ತಿಂಗಳಿಂದಲೂ ಪ್ರಕೃತಿ ವಿಕೋಪ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೆವು. ಜೊತೆಗೆ ವಿಪತ್ತು ನಿರ್ವಹಣಾ ಸಂಸ್ಥೆ ವತಿಯಿಂದ ಮುಂಗಾರು ಪೂರ್ವಕ್ಕೂ ಮೊದಲೇ ಅಣಕ ಪ್ರದರ್ಶನ ಹಮ್ಮಿಕೊಂಡಿದ್ದು, ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಹೇಗೆ ಕಾರ್ಯ ಪ್ರವೃತ್ತರಾಗಬೇಕು ಎಂಬ ಅಣಕ ಪ್ರದರ್ಶನ ನಡೆಸಲಾಗುತ್ತಿದೆ. ಪ್ರದರ್ಶನದಲ್ಲಿ ಭಾಗವಹಸಿರುವ ಎಲ್ಲಾ ತಂಡಗಳು ವೃತ್ತಿ ನೈಪುಣ್ಯತೆ ಹೊಂದಿದ್ದು, ಜಿಲ್ಲೆಯ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭರವಸೆ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್ ಮಾತನಾಡಿ, ಪ್ರವಾಹ ಸಂದರ್ಭದಲ್ಲಿ ಪರಿಸ್ಥಿತಿ ಹೇಗೆ ನಿರ್ವಹಿಸಬೇಕು ಎಂಬುದು ಅಣಕ ಪ್ರದರ್ಶನದಲ್ಲಿ ತಿಳಿದು ಬಂದಿದೆ. ಭಾಗವಹಿಸಿರುವ ಎಲ್ಲ ತಂಡಗಳ ನಡುವೆ ಸಮನ್ವಯತೆ ಸಾಧಿಸುತ್ತೇವೆ. ಪರಿಸ್ಥಿತಿ ಆದರಿಸಿ ಇನ್ನೂ ಹೆಚ್ಚಿನ ಭದ್ರತಾ ಸಿಬ್ಬಂದಿ ರವಾನೆಗೆ ಮನವಿ ಮಾಡುತ್ತೇವೆ. ಈ ಬಾರಿ ಎನ್ಡಿಆರ್ಎಫ್ ನೂತನ ತಂಡ ಜಿಲ್ಲೆಗೆ ಆಗಮಿಸಿದ್ದು, ಮಳೆಗಾಲ ಅಂತ್ಯದವರೆಗೂ ಜಿಲ್ಲೆಯಲ್ಲೇ ವಾಸ್ತವ್ಯ ಹೂಡುವುದು ಎಂದು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.