ಕೊಡಗು: ಟೀಮ್ 12 ಆಫ್ ರೋಡ್ ಸಂಘದ ವತಿಯಿಂದ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಬೆಟ್ಟಗಳ ನಡುವೆ ಜೀಪ್ ರ‍್ಯಾಲಿ ಆಯೋಜಿಸಲಾಗಿತ್ತು. ಇಲ್ಲಿ ನಡೆದ ಜೀಪ್ ರ‍್ಯಾಲಿ ಎಲ್ಲರ ಗಮನ ಸೆಳೆಯಿತು.
ಟೀಮ್ ಆಫ್ ರೋಡ್ ಸಂಘದ ವತಿಯಿಂದ ಡೀಪ್ ಅಂಡ್ ಡರ್ಟಿ 2k21 ಟ್ರ್ಯಾಕ್ ಎಂಬೆಸರಿನಲ್ಲಿ ಸುಮಾರು 15 ಕಿ.ಮೀ.ವರೆಗೆ ರ‍್ಯಾಲಿಯನ್ನು ಏರ್ಪಡಿಸಲಾಗಿತ್ತು. ರಾಷ್ಟ್ರ ಮಟ್ಟದಲ್ಲಿ ನಡೆದ ರ‍್ಯಾಲಿಯಲ್ಲಿ ಕೇರಳ, ಚಿಕ್ಕಮಂಗಳೂರು, ಬೆಂಗಳೂರು ಸೇರಿದಂತೆ ಇತರ ಭಾಗಗಳಿಂದ ಮಹಿಳಾ ಸ್ಪರ್ಧಿಗಳು ಸೇರಿ 100ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ವಿವಿಧ ಕಂಪನಿಯ ಸುಮಾರು 74 ಜೀಪ್ಗಳು ಭಾಗಿಯಾಗಿದ್ದವು. ಕೊರೊನಾ ಹಿನ್ನೆಲೆ ಸ್ಪರ್ಧಿಗಳು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.
ರಸ್ತೆ ಇಲ್ಲದೆ ಬೆಟ್ಟ - ಗುಡ್ಡಗಳು, ಸಣ್ಣ ಸಣ್ಣ ನದಿಗಳು ಹರಿಯುವ ಸ್ಥಳಗಳಲ್ಲಿ ಸಾಗುವ ಸ್ಪರ್ಧೆ ನೆರೆದಿದ್ದ ಇತರ ಜನರಿಗೆ ಸಖತ್ ರೋಮಾಂಚನಕಾರಿ ಅನುಭವ ನೀಡಿತು. 15 ಕಿ.ಮೀ. ಉದ್ದದ ಟ್ರ್ಯಾಕ್ ಸಾಹಸ ಪ್ರಿಯರಿಗೆ ಥ್ರಿಲ್ ನೀಡಿತು. ನೀರಿನ ನಡುವೆ ಕಲ್ಲು, ಮಣ್ಣುಗಳ ನಡುವೆ ಕಾಡಿನ ರಸ್ತೆಯಲ್ಲಿ ಸಾಗಿದ ರ‍್ಯಾಲಿ ಎದೆ ನಡುಗಿಸುವಂತಿತ್ತು.
ಸೋಮವಾರಪೇಟೆ ಭಾಗದ ಕಾಫಿತೋಟದಲ್ಲಿ ಮತ್ತು ರಸ್ತೆಗಳಿಲ್ಲದ ಜಾಗದಲ್ಲಿ ಜೀಪ್ ಓಡಿಸುವ ದೃಶ್ಯ ಮನೋಹರವಾಗಿತ್ತು. ಕೆಲವು ಭಾಗದಲ್ಲಿನ ಎತ್ತರ ಬೆಟ್ಟಗಳನ್ನು ಹತ್ತುವುದಕ್ಕೆ ಸವಾರರು ಕಷ್ಟ ಪಡುತ್ತಿದ್ದರು. ನಿರಂತರವಾಗಿ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೇ ಸ್ಪರ್ಧಿಗಳು ಜೂಯ್ ಎಂದು ಜೀಪು ಚಲಾಯಿಸುತ್ತಿದ್ದರು. ಇತ್ತ ಚಪ್ಪಾಳೆ ಹಾಗೂ ಜೋರಾಗಿ ಕೂಗುವ ಮೂಲಕ ಅಭಿಮಾನಿಗಳು ಕ್ರೀಡಾಪಟುಗಳನ್ನು ಹುರಿದುಂಬಿಸುತ್ತಿದ್ದರು.
ಈ ರ‍್ಯಾಲಿಯಲ್ಲಿ ಹುಡುಗರಿಗಿಂತ ನಾವೇನು ಕಡಿಮೆ ಇಲ್ಲ ಎಂದು ಮಹಿಳಾ ಸ್ಪರ್ಧಿಗಳು ಭಾಗವಹಿಸಿ ಕಷ್ಟಕರವಾದ ಟ್ರ್ಯಾಕ್ನಲ್ಲಿಯೂ ಜೀಪ್ ಓಡಿಸಿ ಸೈ ಎನಿಸಿಕೊಂಡರು. ಒಬ್ಬರಿಗಿಂತ ಒಬ್ಬರು ವೇಗವಾಗಿ ಬಂದು ಬೆಟ್ಟವನ್ನು ಹತ್ತಿಸಿ ನದಿ ನೀರನ್ನು ಮೇಲಕ್ಕೆ ಹಾರಿಸಿ ವೇಗವಾಗಿ ಮರೆಯಾಗುತ್ತಿದ್ದರು.
ಅರಣ್ಯದಲ್ಲಿ ಕಾಫಿ ತೋಟದೊಳಗಿನ ಚಿಕ್ಕ ಚಿಕ್ಕ ರಸ್ತೆಗಳಲ್ಲಿ, ರೋಡ್ ಇಲ್ಲದ ಕಡೆಯಲ್ಲಿ ಮತ್ತು ಪ್ರಕೃತಿ ಸೌಂದರ್ಯವನ್ನು ಸವಿಯೋವುದಕ್ಕಾಗಿ ಇಂತಹ ಜೀಪ್ ರ‍್ಯಾಲಿಗಳನ್ನು ಆಯೋಜನೆ ಮಾಡಲಾಗುತ್ತದೆ. ಪ್ರಶಾಂತ, ನಿಶ್ಯಬ್ಧವಾದ ವಾತಾವರಣದಲ್ಲಿ ಬೆಟ್ಟ - ಗುಡ್ಡಗಳ ನಡುವೆ ಕಲರ್ ಕಲರ್ ಜೀಪ್‍ಗಳ ಕಲರವ ನೋಡುಗರ ಕಣ್ಣಿಗೆ ಹಬ್ಬ ಉಂಟು ಮಾಡಿತು.
ಇದನ್ನೂ ಓದಿ: ಪಕ್ಷ ತೊರೆಯುವ ಶಾಸಕರು, ಮುಖಂಡರ ನಡೆಗೆ JDS ದಳಪತಿಗಳ ಪ್ರತಿತಂತ್ರವೇನು?