ಕೊಡಗು: ಹೃದಯಾಘಾತದಿಂದ 6 ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವ ಮನಕಲಕುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಕೀರ್ತನ್ (12) ಮೃತಪಟ್ಟ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮದ ಚಾಲಕ ಮಂಜಾಚಾರಿ ಅವರ ಪುತ್ರ ಕೊಪ್ಪಭಾರತ ಮಾತಾ ಶಾಲಾ ವಿದ್ಯಾರ್ಥಿ ಕೀರ್ತನ್ ಅಗಲಿಕೆ ಎಲ್ಲರನ್ನು ದುಃಖದಲ್ಲಿ ಮುಳುಗಿಸಿದೆ.
ಶನಿವಾರ ತಡರಾತ್ರಿ ಮಲಗಿದ ಜಾಗದಿಂದ ಕೀರ್ತನ್ ಎರಡು ಬಾರಿ ಕಿರುಚಿಕೊಂಡಿದ್ದು, ಪೋಷಕರು ಕುಶಾಲನಗರ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಬಾಲಕ ಮೃತಪಟ್ಟಿದ್ದಾನೆ. ಈತ ಓದುತ್ತಿದ್ದ ಅದೇ ಶಾಲೆಯ ಬಸ್ ಚಾಲಕನಾಗಿ ಬಾಲಕನ ತಂದೆ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಹುಬ್ಬಳ್ಳಿ: ಹೃದಯಾಘಾತದಿಂದ ವಿದ್ಯಾರ್ಥಿಯೊಬ್ಬ ಶಾಲೆಯಲ್ಲಿಯೇ ಸಾವನ್ನಪ್ಪಿದ ಘಟನೆ ಕಲಘಟಗಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿ ಇತ್ತೀಚಿಗೆ ನಡೆದಿತ್ತು.
ಮೃತ ಬಾಲಕ ಮುಕ್ತುಂ ಮಹ್ಮದ್ರಫಿ ಮನಿಯಾರ ಎಂದು ತಿಳಿದು ಬಂದಿದ್ದು, ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ವಿದ್ಯಾರ್ಥಿ ಕಲಘಟಗಿ ನಿವಾಸಿಯಾಗಿದ್ದು, ಬಾಲಕನಿಗೆ ಈ ಮುಂಚೆಯೇ ಹೃದಯದ ಸಮಸ್ಯೆ ಇತ್ತು ಎನ್ನಲಾಗಿದೆ.
ಎಂದಿನಂತೆ ಇಂದು ಬೆಳಗ್ಗೆ ರಫಿ ಶಾಲೆಗೆ ಬಂದಿದ್ದ ವೇಳೆ ಏಕಾಎಕಿ ಕ್ಲಾಸಿನಲ್ಲಿಯೇ ಕುಸಿದು ಬಿದ್ದಿದ್ದಾನೆ. ನಂತರ ಶಿಕ್ಷಕರು ಕೂಡಲೇ ಅವನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಾದರೂ ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾನೆ.