ಕೊಡಗು : ಶ್ರೀಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವಕ್ಕೆ ಶ್ರೀ ಭಾಗಮಂಡಲ ಭಗಂಡೇಶ್ವರ ಮತ್ತು ತಲಕಾವೇರಿ ಪವಿತ್ರ ಕ್ಷೇತ್ರದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಶಾಸಕ ಎ.ಎಸ್.ಪೊನ್ನಣ್ಣ ಭಾನುವಾರ ಭಾಗಮಂಡಲ ಭಗಂಡೇಶ್ವರ ದೇವಾಲಯ, ತ್ರಿವೇಣಿ ಸಂಗಮ ಹಾಗೆಯೇ ತಲಕಾವೇರಿ ಕೇತ್ರಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು.
ಭಾಗಮಂಡಲ ದೇವಾಲಯದಲ್ಲಿ ನಂದಾದೀಪ ಕಾರ್ಯಕ್ರಮ ನಡೆಯಿತು. ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕ್ಷಯ ಪಾತ್ರೆ ಇಡಲಾಯಿತು. ನಂತರ ಭಾಗಮಂಡಲದ ಭಗಂಡೇಶ್ವರ, ಮಹಾಗಣಪತಿ, ಸುಬ್ರಮಣ್ಯ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಅಲ್ಲಿನ ಸಿದ್ಧತೆಗಳನ್ನು ಪರಿಶೀಲಿಸಿದ ಸಚಿವ ಭೋಸರಾಜು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಾಂಸ್ಕೃತಿಕ ಗೀತಾ ಗಾಯನ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಾಣ, ಭಕ್ತಾಧಿಗಳ ಅನುಕೂಲಕ್ಕಾಗಿ ಬ್ಯಾರಿಕೇಡ್ ನಿರ್ಮಾಣ, ಅಗತ್ಯ ವ್ಯವಸ್ಥೆಗಳು ಮತ್ತಿತರ ಸಿದ್ಧತೆ ಬಗ್ಗೆ ಸಚಿವರು ಮಾಹಿತಿ ಪಡೆದರು. ನಾಡಿನ ಜೀವನದಿ, ಕಾವೇರಿ ನದಿ ಉಗಮ ಸ್ಥಾನ ತಲಕಾವೇರಿಯಲ್ಲಿ ಇದೇ ಸಂದರ್ಭದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಸಂಬಂಧಿಸಿದಂತೆ ಸಿದ್ಧತೆ ಬಗ್ಗೆ ಹಲವು ಮಾಹಿತಿ ನೀಡಿದರು. ಸಚಿವ ಎನ್.ಎಸ್ ಭೋಸರಾಜು ಮಾತನಾಡಿ, ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಸಂಬಂಧ ಒಂದು ತಿಂಗಳಿನಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಕ್ತಾಧಿಗಳಿಗೆ ಅಗತ್ಯ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ವಾಹನ ನಿಲುಗಡೆ, ಭಾಗಮಂಡಲದಿಂದ ತಲಕಾವೇರಿಯವರೆಗೆ, ತಲಕಾವೇರಿಯಿಂದ ಭಾಗಮಂಡಲದವರೆಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹಿಂದಿನಂತೆ ಅನ್ನದಾನ ನಡೆಯಲಿದೆ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಭಾಗಮಂಡಲದಿಂದ ತಲಕಾವೇರಿವರೆಗೆ ವಿದ್ಯುತ್ ದೀಪ, ಹೀಗೆ ಹಲವು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವೈದ್ಯರು ಮತ್ತು ಶ್ರುಶ್ರೂಷಕರ ನಿಯೋಜನೆ, ಆಂಬ್ಯುಲೆನ್ಸ್ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಸಚಿವರು ಹೇಳಿದರು.
ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಪವಿತ್ರ ಸ್ಥಳದಲ್ಲಿ ಪ್ಲಾಸ್ಟಿಕ್ ಬಳಸಬಾರದು. ಸ್ವಪ್ರೇರಣೆಯಿಂದ ಭಕ್ತರೇ ಪ್ಲಾಸ್ಟಿಕ್ ನಿಯಂತ್ರಿಸಬೇಕು. ಶುಚಿತ್ವಕ್ಕೆ ಒತ್ತು ನೀಡಬೇಕು ಎಂದು ಕೋರಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಮಾಹಿತಿ ನೀಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, 2 ಡಿವೈಎಸ್‍ಪಿ, 9 ಪೊಲೀಸ್ ಇನ್ಸ್ಪೆಕ್ಟರ್, 15 ಸಬ್ ಇನ್ಸ್ಪೆಕ್ಟರ್ಗಳು, 30 ಮಂದಿ ಸಹಾಯಕ ಸಬ್ ಇನ್ಸ್ಪೆಕ್ಟರ್ಗಳು, 350 ಹೆಡ್ ಕಾನ್ಸ್ಟೇಬಲ್, ಅಗತ್ಯ ಪೊಲೀಸರು, ಜೊತೆಗೆ ಗೃಹ ರಕ್ಷಕದಳದವರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಭಾಗಮಂಡಲದಿಂದ-ತಲಕಾವೇರಿ, ತಲಕಾವೇರಿಯಿಂದ ಭಾಗಮಂಡಲಕ್ಕೆ 20 ಬಸ್‍ಗಳು ಸಂಚರಿಸಲಿವೆ. ಜನದಟ್ಟಣೆ ನೋಡಿಕೊಂಡು ಮಡಿಕೇರಿ-ಭಾಗಮಂಡಲ, ಭಾಗಮಂಡಲದಿಂದ-ಮಡಿಕೇರಿ ಮಾರ್ಗ ಬಸ್‍ಗಳು ಸಂಚರಿಸಲಿವೆ ಎಂದು ಕೆಎಸ್ಆರ್ಟಿಸಿ ಡಿಪೋ ವ್ಯವಸ್ಥಾಪಕ ಮೆಹಬೂಬ ಆಲಿ ಹೇಳಿದರು.
ಇದನ್ನೂ ಓದಿ: ಜೀವನದಿ ಕಾವೇರಿ ತೀರ್ಥೋದ್ಭವಕ್ಕೆ ದಿನಾಂಕ ನಿಗದಿ, ವಿವಿಧ ಪೂಜಾ ಕಾರ್ಯಕ್ರಮ ಆಯೋಜನೆ