ಕೊಡಗು: ಜಿಲ್ಲೆಯಲ್ಲಿ ಮಳೆ ತಂದ ಅವಾಂತರ ಅಷ್ಟಿಷ್ಟಲ್ಲ. ಮಳೆ ಕಡಿಮೆ ಆಯ್ತು ಎನ್ನುವಾಗ ಮತ್ತೆ ಅಬ್ಬರಿಸಿ ಜನತೆಯಲ್ಲಿ ಆತಂಕ ಮೂಡುವಂತೆ ಮಾಡಿದೆ. ಇದೀಗ ಜಿಲ್ಲೆಯಲ್ಲಿ ಸುರಿದ ಮಳೆ ಹಾಗೂ ಗುಡ್ಡ ಕುಸಿತದಿಂದ ಕೇವಲ ಮನೆಗಳಿಗೆ ಮಾತ್ರ ಹಾನಿಯಾಗಿಲ್ಲ. ಬದಲಾಗಿ ಶಾಲಾ ಕಟ್ಟಡಗಳು ಸಹ ಹಾನಿಯಾಗಿವೆ.
ಶಾಲೆಗಳ ಮೇಲೆ ಗುಡ್ಡ ಕುಸಿತ: ಕೊಯನಾಡು ಹಾಗೂ ಜೋಡುಪಾಲ ವ್ಯಾಪ್ತಿಯಲ್ಲಿ ಮಳೆಗೆ ಜನ ತತ್ತರಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆಯಾಗಿದ್ದು, ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಪಯಶ್ವಿನಿ ನದಿ ಕೂಡ ಉಕ್ಕಿ ಹರಿಯುತ್ತಿದ್ದು, ಹಲವು ಮನೆಗಳಿಗೆ ನೀರು ತುಂಬಿ ಅವಾಂತರಗಳನ್ನೇ ಸೃಷ್ಟಿಸುತ್ತಿದೆ. ಅಲ್ಲದೆ, ಸಾಕಷ್ಟು ಮನೆಗಳ ಮೇಲೆಯೂ ಗುಡ್ಡ ಕುಸಿತವಾಗಿದ್ದು, ಜನತೆ ಜೀವ ಭಯದಲ್ಲೇ ಬದುಕುತ್ತಿದ್ದಾರೆ. ಈ ನಡುವೆ ಶಾಲೆಗಳ ಮೇಲೆಯೂ ಗುಡ್ಡ ಕುಸಿತವಾಗಿದ್ದು, ವಿದ್ಯಾರ್ಥಿಗಳು ಕೂಡ ಕಂಗಲಾಗಿದ್ದಾರೆ.
ಮಡಿಕೇರಿ ಸಮೀಪದ ಕೊಯನಾಡು ಹಾಗೂ ಜೋಡುಪಾಲದ ಪ್ರಾಥಮಿಕ ಶಾಲೆಯ ಕಟ್ಟಡದ ಮೇಲೂ ಮಣ್ಣು ಬಿದ್ದಿದೆ. ಈ ಒಂದು ಶಾಲೆಯಲ್ಲಿ ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಅವರಿಗೆ ಪರ್ಯಾಯವಾಗಿ ಸಮೀಪದ ಸಂಪಾಜೆ ಶಾಲೆಯಲ್ಲಿ ಅವಕಾಶ ಕಲ್ಲಿಸಲಾಗಿದೆ.
ಜೋಡು ಪಾಲದ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಹೊಸ ಕಟ್ಟಡದ ಮೇಲೆಯೂ ಗುಡ್ಡ ಕುಸಿದಿದೆ. ಹಳೆಯ ಕಟ್ಟಡ ಶಿಥಿಲಾವಸ್ಥೆ ತಲುಪಿರುವ ಹಿನ್ನೆಲೆಯಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲಾಗಿತ್ತು. ಆದ್ರೆ, ಇದೀಗ ಹೊಸ ಕಟ್ಟಡದ ಮೇಲೆಯೂ ಗುಡ್ಡ ಕುಸಿತವಾಗಿರೋದ್ರಿಂದ ಹಳೆಯ ಕಟ್ಟಡದಲ್ಲೇ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಲಾಗಿದೆ.
ರಸ್ತೆ ಸಂಚಾರ ಬಂದ್: ತಲಕಾವೇರಿ ಮತ್ತು ಭಾಗಮಂಡಲಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಭಾಗಮಂಡಲದಿಂದ ಕೇರಳಕ್ಕೆ ತೆರಳುವ ರಸ್ತೆಯಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತವಾಗಿದೆ. ತಣ್ಣಿಮಾನಿ ಗ್ರಾಮದ ಬಳಿ ಬೆಟ್ಟಕುಸಿದಿದ್ದು, ಜನರು ಆತಂಕದಲ್ಲಿದ್ದಾರೆ. ಗಡಿ ಭಾಗ ಚೆಂಬು ಸಂಪಾಜೆ ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ತಪಸ್ವಿನಿ ನದಿ ಅಪಾಯ ಮಟ್ಟಮೀರಿ ಹರಿಯುತ್ತಿದೆ. ಚೆಂಬು ಗ್ರಾಮದಿಂದ ಸಂಪಾಜೆ ಹಾಗೂ ಕಲ್ಲುಗುಂಡಿ ತೆರಳುವ ಚೆಂಬು ಗ್ರಾಮದ ಮರ್ಪಡ್ಕ ಎಂಬಲ್ಲಿ ಎರಡು ರಸ್ತೆ ಸಂಪರ್ಕ ಕಲ್ಪಸುವ ಸೇತುವೆಯ ಎರಡೂ ಭಾಗದಲ್ಲಿ ಮಣ್ಣು ಕುಸಿತವಾಗಿದೆ.
ಪಯಶ್ವಿನಿ ನದಿಯಿಂದ ಕೊಡಗಿನ ಗಡಿ ಭಾಗದ ಗ್ರಾಮಗಳಿಗೆ ಭಾರಿ ಸಮಸ್ಯೆಯಾಗಿದ್ದು, ಜನ ಜೀವನವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸೇತುವೆ ಕುಸಿತವಾದ ಕಾರಣ 16 ಗ್ರಾಮಗಳಿಗೆ ತೆರೆಳುವ ಜನರು ಸಂಚಾರ ಮಾಡಲು ರಸ್ತೆ ಸಂಪರ್ಕವಿಲ್ಲದೆ ಕೂಲಿಕಾರ್ಮಿಕರು ಶಾಲಾ- ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಮಳೆ ಅಬ್ಬರ: ಗ್ರಾಮಗಳ ಸಂಪರ್ಕ ಕಡಿತ, ಹೊಗೆನಕಲ್ ಜಲಪಾತ ಬಳಿ ಮೊಸಳೆ ದರ್ಶನ