ಮಡಿಕೇರಿ: ಕೊಡಗು ಮೂಲದ ಯುವಕನೊಬ್ಬ ಸಲಿಂಗ ವಿವಾಹವಾಗಿದ್ದು, ಕೊಡವ ಸಾಂಪ್ರದಾಯಿಕ ಉಡುಪು ತೊಟ್ಟಿರುವುದು ಇದೀಗ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕೊಡಗಿನ ಶರತ್ ಪೊನ್ನಪ್ಪ ಹಾಗೂ ಉತ್ತರ ಭಾರತ ಮೂಲದ ಸಂದೀಪ್ ದೋಸಾಂಜ್ ಎಂಬವರು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸೆಪ್ಟೆಂಬರ್ 26ರಂದು ವಿವಾಹವಾಗಿದ್ದಾರೆ. ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ವಿವಾಹವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಶರತ್ ಕಳೆದ 20 ವರ್ಷಗಳಿಂದ ವಿದೇಶದಲ್ಲಿ ನೆಲೆಸಿದ್ದಾನೆ. ವಿವಾಹದಲ್ಲಿ ಕೊಡವ ಸಾಂಪ್ರದಾಯಿಕ ಉಡುಗೆ, ಕೊಡಗಿನ ವಾಲಗ ಬಳಕೆ ಮಾಡಲಾಗಿದೆ. ಸಾಂಪ್ರದಾಯಿಕ ಉಡುಗೆ ತೊಟ್ಟು ಸಲಿಂಗ ವಿವಾಹವಾಗಿರುವುದಕ್ಕೆ ಕೊಡವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಮಡಿಕೇರಿಯ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್ ದೇವಯ್ಯ ಪ್ರತಿಕ್ರಿಯಿಸಿದ್ದು, ಸಮುದಾಯದವರು ಅಂತರ್ ಜಾತಿಯ ವಿವಾಹ ಆಗಿರುವುದನ್ನು ನಾವು ಕಂಡಿದ್ದೇವೆ. ಆದರೆ ಒಂದೇ ಲಿಂಗದವರು ವಿವಾಹ ಆಗಿರುವುದು ಇದೇ ಮೊದಲು. ಇದು ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವುದು ನಮಗೆ ಆಘಾತ ತಂದಿದೆ. ಅಮೆರಿಕದಲ್ಲಿ ಕೊಡವ ಜನಾಂಗದ ಕೂಟ ಇದೆ. ಅದರ ಅಧ್ಯಕ್ಷೆ ಜೀನಾ ಪೊನ್ನಪ್ಪ ಅವರಿಗೆ ಪತ್ರ ಬರೆದಿದ್ದೇನೆ. ಕುಟುಂಬದಲ್ಲಿ ನಿರ್ಧಾರ ತೆಗೆದುಕೊಂಡು ಆತನನ್ನು ಕುಟುಂಬದಿಂದ ಹೊರಗಿಡಿ ಎಂದು ಪತ್ರದಲ್ಲಿ ಒತ್ತಾಯಿಸಿದ್ದೇನೆ. ಅಲ್ಲದೇ ಆತನನ್ನು ಕೊಡವ ಜನಾಂಗದಿಂದಲೇ ದೂರ ಇಡುವಂತೆ ಕುಟುಂಬದಿಂದ ಹೊರಗಿಡುವಂತೆ ನಿರ್ಧಾರ ಮಾಡಿ ಕೊಡವ ಸಮಾಜಗಳ ಒಕ್ಕೂಟ ಹಾಗೂ ಅಖಿಲ ಕೊಡವ ಸಮಾಜದ ಅಧ್ಯಕ್ಷರಿಗೂ ಪತ್ರ ಬರೆಯುತ್ತೇನೆ ಎಂದು ತಿಳಿಸಿದ್ದಾರೆ.
ಮಡಿಕೇರಿಯ ಕೊಡವ ಸಮಾಜದ ಪ್ರಧಾನ ಕಾರ್ಯದರ್ಶಿ ಮಾದೇಟಿರ ಬೆಳ್ಯಪ್ಪ ಈ ಕುರಿತು ಪ್ರತಿಕ್ರಿಯಿಸಿದ್ದು, ಕೊಡವ ಉಡುಪು ತೊಟ್ಟಿರುವುದು ಖಂಡನೀಯ, ಇಡೀ ಸಮುದಾಯಕ್ಕೆ ಅವಮಾನ ಮಾಡಿರುವುದನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ.