ಕೊಡಗು: ಡ್ರಗ್ಸ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಿ ಆರೋಪಿಯೊಬ್ಬನನ್ನು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಇಂದು ಬಂಧಿಸಿದ್ದಾರೆ.
ಒಪೊಂಗ್ ಸ್ಯಾಮ್ಸನ್ ಬಂಧಿತ ಆರೋಪಿ. ಆಫ್ರಿಕಾದ ಎಕ್ರಾ ರಾಜ್ಯದ ಕುಂಸ್ಸೆ ಗ್ರಾಮದ ವ್ಯಕ್ತಿ ಮತ್ತು ಸಹಚರರು ಆ. 28 ರಂದು ಮಡಿಕೇರಿಯ ರಾಜಶೀಟ್ ಬಳಿ ಆ್ಯಂಪೆಟಮಿನ್ ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದರು. ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದ ವ್ಯಕ್ತಿಗಳಿಗೆ ಡ್ರಗ್ಸ್ ಸರಬರಾಜು ಮಾಡಲು ಯತ್ನಿಸುತ್ತಿದ್ದರು. ಈ ವೇಳೆ ಅಯ್ಯಂಗೇರಿಯ ಮಜೀದ್ ಮತ್ತು ಶಿಯಾಬುದ್ದೀನ್ ಇಬ್ಬರನ್ನು ಬಂಧಿಸಲಾಗಿತ್ತು.
ಬಂಧನದ ವೇಳೆ ಆರೋಪಿ ಒಪೊಂಗ್ ಸ್ಯಾಮ್ಪ್ಸನ್ ತಲೆ ಮರೆಸಿಕೊಂಡಿದ್ದನು. ಬಳಿಕ ಆರೋಪಿಗಾಗಿ ಡಿಸಿಐಬಿ ಪೊಲೀಸರು ಬಲೆ ಬೀಸಿದ್ದರು. ಬೆಂಗಳೂರಿನ ಹೊರಮಾವಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.