ಕೊಡಗು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಕಡತದಲ್ಲೂ ಶಾಸಕ ರೋಷನ್ ಬೇಗ್ ಅವರ ಹೆಸರಿಲ್ಲ ಎಂದು ಕಂದಾಯ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿ ಮಹಾಮಳೆಗೆ ಹಾನಿಗೆ ಒಳಗಾಗಿದ್ದ ನೆರೆ ಸಂತ್ರಸ್ತರಿಗೆ ಕರ್ಣಂಗೇರಿಯಲ್ಲಿ ಸರ್ಕಾರದ ವತಿಯಿಂದ ನಿರ್ಮಿಸುತ್ತಿರುವ ಆಶ್ರಯ ಮನೆಗಳ ಕಾಮಗಾರಿ ಪರಿಶೀಲಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೋಷನ್ ಬೇಗ್ ಐಎಂಎ ಪ್ರಕರಣದಲ್ಲಿ ಇದ್ದಾರೆ ಅಂತ ಹೇಳಲು ನನಗೆ ಅಧಿಕಾರವಿಲ್ಲ. ಯಾವ ಕಡತದಲ್ಲೂ ಅವರ ಹೆಸರಿಲ್ಲ. ಒಂದೂವರೆ ತಿಂಗಳ ಹಿಂದೆ ರೋಷನ್ ಬೇಗ್ ಐಎಂಎ ಮಾಲೀಕರ ಜೊತೆ ನನ್ನ ಕಚೇರಿಯಲ್ಲಿ ಭೇಟಿ ಮಾಡಿ, ಇವರು ನಮ್ಮ ಕ್ಷೇತ್ರದವರು ಎಂದು ಪರಿಚಯಿಸಿದ್ದರು. ಆಗ ರಾಜ್ಯ ಸರ್ಕಾರದಿಂದ ನಿರಪೇಕ್ಷಣಾ ಅನುಮತಿ ಪತ್ರ ದೊರೆತಿಲ್ಲ ಎಂದಿದ್ದರು ಎಂದರು.
ಬಿಜೆಪಿ ಶಾಸಕರು ಪುನಃ ಆಪರೇಷನ್ ಕಮಲ ಪ್ರಾರಂಭಿಸಿದ್ದು, ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಹಣದ ಆಮಿಷವೊಡ್ಡುತ್ತಿದ್ದಾರೆ ಎಂಬ ಸಿಎಂ ಕುಮಾರಸ್ವಾಮಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ದೇಶಪಾಂಡೆ, ನಾನು ಜಿಲ್ಲೆಯಲ್ಲಿ ಅತಿವೃಷ್ಟಿ-ಅನಾವೃಷ್ಟಿಗೆ ಒಳಗಾಗಿರುವ ಜಿಲ್ಲೆಗಳ ಪ್ರವಾಸ ಮಾಡುತ್ತಿದ್ದೇನೆ. ಆ ಬಗ್ಗೆ ನನಗೆ ಗೊತ್ತಿಲ್ಲ. ಇದರ ಬಗ್ಗೆ ಅವರಿಗೆ ಮಾಹಿತಿ ಇರಬೇಕು ಎಂದರು. ನೆರೆ ಸಂತ್ರಸ್ತರಿಗೆ ಸರ್ಕಾರ ನಿರ್ಮಿಸುತ್ತಿರುವ ಮನೆಗಳ ಗುಣಮಟ್ಟದ ಬಗ್ಗೆ ಆರೋಪ ಮಾಡಿದ್ದ ನಟಿ ಹರ್ಷಿಕಾ ಪೂಣಚ್ಚ ಆರೋಪದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಯೋಜನೆಯಡಿ ಹಲವು ಮನೆಗಳನ್ನು ನಾವೂ ನಿರ್ಮಿಸಿದ್ದೇವೆ. ಇಲ್ಲಿ ನಿರ್ಮಿಸಿರುವ ಮನೆಗಳ ಬಗ್ಗೆ ಏನಾದರೂ ಕೊರತೆ ಇದ್ದರೆ ಹೇಳಿ, ಸರಿಪಡಿಸೋಣ ಎಂದರು.