ವಿರಾಜಪೇಟೆ/ಕೊಡಗು: ಗಾಂಜಾ ಮಾರಾಟ ವಿಷಯಕ್ಕೆ ಸಂಬಂಧಿಸಿದಂತೆ ಯುವಕರ ಗುಂಪೊಂದು ವ್ಯಕ್ತಿ ಮೇಲೆ ಹಲ್ಲೆ ನಡೆಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಯಾಕೂಬ್ ಖಾನ್ (55) ಹಲ್ಲೆಗೊಳಗಾದ ವ್ಯಕ್ತಿ. ಈತ ಗಾಂಜಾ ಮಾರುತ್ತಿದ್ದ ಎನ್ನಲಾಗಿದ್ದು, ಗಾಂಜಾ ಮಾರಾಟ ವಿಷಯದಲ್ಲಿ ನಿನ್ನೆ ಯುವಕರ ಗುಂಪಿನೊಂದಿಗೆ ಜಗಳ ನಡೆದಿತ್ತು. ಇದನ್ನು ಗಮನಿಸಿದ ಸ್ಥಳೀಯರು ತಿಳುವಳಿಕೆ ಹೇಳಿ ಜಗಳ ನಿಲ್ಲಿಸಿದ್ದರು.
ಇದರಿಂದ ರೊಚ್ಚಿಗೆದ್ದ ಯುವಕರು, ಗಾಂಜಾ ಮಾರಾಟ ಮಾಡಿ ಮನೆಗೆ ತೆರಳುತ್ತಿದ್ದ ಯಾಕೂಬ್ ಮೇಲೆ ಬೈಕ್ನಲ್ಲಿ ಬಂದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಯಾಕೂಬ್ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ.
ಪಟ್ಟಣದಲ್ಲಿ ಗಾಂಜಾ ಮಾರಾಟ ಹೆಚ್ಚಾಗಿ ನಡೆಯುತ್ತಿದ್ದು, ಆಗಾಗ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಇವುಗಳನ್ನು ಮಟ್ಟ ಹಾಕುವಂತೆ ಪೊಲೀಸ್ ಇಲಾಖೆಗೆ ಸ್ಥಳೀಯರು ಒತ್ತಾಯಿಸಿದ್ದಾರೆ.