ಕೊಡಗು: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಮರಿ ಕಾಡಾನೆಯೊಂದು ತಾಯಿಯಿಂದ ಬೇರ್ಪಟ್ಟು ಕಾಫಿತೋಟದಲ್ಲಿ ನಿರ್ಮಿಸಲಾಗಿದ್ದ ಚಿಕ್ಕ ಬಾವಿಗೆ ಬಿದ್ದು ಪರದಾಡಿದೆ. ಈ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ದೇವರಪುರ ಗ್ರಾಮದಲ್ಲಿ ನಡೆದಿದೆ.
ಸುಭ್ರಮಣಿ ಎಂಬುವರ ಕಾಫಿತೋಟದಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ. ಆನೆ ಘೀಳಿಡುವ ಶಬ್ದ ಕೇಳಿ ಕಧಳಿ ಮಾಲೀಕ ಸ್ಥಳಕ್ಕೆ ಬಂದು ನೋಡಿದ್ದಾಗ ಮರಿ ಆನೆ ಬಾವಿಗೆ ಬಿದ್ದಿದ್ದು ಗೊತ್ತಾಗಿದೆ. ಕೂಡಲೇ ಆರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಸ್ಥಳೀಯರ ಜೊತೆ ಸೇರಿ ಬಾಯಿಯ ಕಲ್ಲನನ್ನು ಮೇಲೆತ್ತಿ ಆನೆಗೆ ಬರಲು ಜಾಗ ಮಾಡಿದ್ದಾರೆ.
ಆದ್ರೆ ಆನೆಗೆ ಬಾವಿ ಹತ್ತಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಆನೆಯ ಕತ್ತಿಗೆ ಹಗ್ಗ ಕಟ್ಟಿ ಮೇಲೆಳೆಯಲಾಯಿತು. ಕೆಲ ಘಂಟೆಗಳಿಂದ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಆನೆ ಮರಿ ಕೊನೆಗೆ ಬದುಕಿದೆ ಎಂದು ಕಾಫಿತೋಟದ ಒಳಗೆ ಓಡಿ ಹೋಯಿತು.
ಜಿಲ್ಲೆಯಲ್ಲಿ ಮಾನವ ಮತ್ತು ಕಾಡಾನೆಗಳ ಸಂಘರ್ಷ ಹೆಚ್ಚಾಗುತ್ತಿದೆ. ಕೆಲವು ಆನೆಗಳು ಕಾಫಿತೋಟದಲ್ಲಿ ಮೃತಪಡುತ್ತಿವೆ. ಅಲ್ಲದೆ ಕಾಡಾನೆಗಳ ದಾಳಿಗೆ ಮನುಷ್ಯರು ಕೂಡಾ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಮುಂದೆಯಾದ್ರೂ ಅರಣ್ಯ ಇಲಾಖೆ ಕಾಡಾನೆಗಳು ನಾಡಿಗೆ ಬರುವುದನ್ನು ತಡೆಯಬೇಕು ಎಂಬುದು ಸ್ಥಳೀಯರ ಆಗ್ರಹ.