ಕೊಡಗು: ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ತೋಟದಲ್ಲಿ ಕಾಣೆಯಾಗಿದ್ದ ಮಗುವನ್ನು ಪೊಲೀಸ್ ಇಲಾಖೆ ಹಾಗೂ ಅರಣ್ಯ ಸಿಬ್ಬಂದಿ ಜಂಟಿ ಕಾರ್ಯಚರಣೆ ನಡೆಸಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಘಟನೆ ವಿರಾಜಪೇಟೆ ಸಮೀಪದ ವೆಸ್ಟ್‍ನೆಮ್ಮಲೆ ಕಾಫಿ ತೋಟದಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಕಾಫಿ ಕೊಯ್ಲು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಿಂದ 11 ಕೂಲಿ ಕಾರ್ಮಿಕರು ವೆಸ್ಟ್‍ನೆಮ್ಮಲೆ ಗ್ರಾಮದ ಪೆಮ್ಮಂಡ ರಾಜ ಕುಶಾಲಪ್ಪ ಅವರ ತೋಟಕ್ಕೆ ಬಂದಿದ್ದರು. ನಿನ್ನೆ ತೋಟದಲ್ಲಿ ಕಾಫಿ ಕೊಯ್ಯುವಾಗ ಕಾರ್ಮಿಕ ನಾಗರಾಜು ಹಾಗೂ ಸೀತಾ ದಂಪತಿಯ 1 ವರ್ಷ 9 ತಿಂಗಳ ನಿತ್ಯಾಶ್ರೀ ಎಂಬ ಮಗುವನ್ನು ನೆಲಕ್ಕೆ ತಾಕುವಂತೆ ಸೀರೆಯಿಂದ ಕಾಫಿ ಗಿಡಕ್ಕೆ ತೊಟ್ಟಿಲು ಕಟ್ಟಿ ಮಲಗಿಸಿ ಕೆಲಸಕ್ಕೆ ತೆರಳಿದ್ದರು. ಮಗು ನಿದ್ರೆಯಿಂದ ಎಚ್ಚರವಾಗಿ ಇಳಿದು ಕಾಫಿ ತೋಟದೊಳಗೆ ಹೋಗಿದೆ. ಕೆಲಸ ಮುಗಿಸಿ ಸಂಜೆ ಮಗುವನ್ನು ನೋಡಿದಾಗ ಮಗು ಸ್ಥಳದಲ್ಲಿ ಇರಲಿಲ್ಲ. ಇದರಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನಾ ಡಿ.ಪನ್ನೇಕರ್ ಸೂಚನೆಯಂತೆ ಕುಟ್ಟ ವೃತ್ತ ನಿರೀಕ್ಷಕರಾದ ಎಸ್. ಪರಶಿವಮೂರ್ತಿ, ಶ್ರೀಮಂಗಲ ಠಾಣೆ ಪೊಲೀಸ್ ಉಪ ನಿರೀಕ್ಷಕ ಎಂ.ದಿನೇಶ್ ಕುಮಾರ್ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ನೇತೃತ್ವದಲ್ಲಿ ಜಂಟಿ ಕಾರ್ಯಚರಣೆಗೆ ಇಳಿದ ಸಿಬ್ಬಂದಿ ರಾತ್ರಿಯಿಡಿ ಕಾರ್ಯಚರಣೆ ನಡೆಸಿ ಮುಂಜಾನೆ ನಿತ್ರಾಣಗೊಂಡು ಕಾಫಿ ಗಿಡದ ಕೆಳಗೆ ಕುಳಿತಿದ್ದ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ. ಇನ್ನೂ ಸಿಬ್ಬಂದಿಯ ಕಾರ್ಯಚರಣೆಗೆ ಕೊಡಗು ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.