ಕೊಡಗು: ಐತಿಹಾಸಿಕ ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಜನೋತ್ಸವದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ಕೈಗೊಂಡಿದೆ ಎಂದು ಕೊಡಗು ಎಸ್ಪಿ ಸುಮನ್.ಡಿ ಪನ್ನೇಕರ್ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವಮಿ ಹಾಗೂ ದಶಮಿ ದಿನ ಬಂದೋಬಸ್ತ್‌ಗೆ ಪೊಲೀಸ್ ಇಲಾಖೆ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. 4 ಜನ ಡಿವೈಎಸ್ಪಿ,15 ಜನ ಇನ್‌ಸ್ಪೆಕ್ಟರ್‌ಗಳು, 24 ಪಿಎಸ್‌ಐ, 700 ಸಿಬ್ಬಂದಿ, 300 ಗೃಹ ರಕ್ಷಕ ದಳದ ಸಿಬ್ಬಂದಿ, 100 ಮಹಿಳಾ ಪೊಲೀಸರು, 5 ಕೆಎಸ್‌ಆರ್‌ಪಿ, ಹಾಗೂ16 ಡಿಎಆರ್ ಮತ್ತು 2 ವಿಧ್ವಂಸಕ ಕೃತ್ಯ ತಡೆ ತಂಡಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಮಡಿಕೇರಿಗೆ 60 ರಿಂದ 80 ಸಾವಿರ ಹಾಗೂ ಗೋಣಿಕೊಪ್ಪಕ್ಕೆ 15 ಸಾವಿರ ಜನರು ಬರುವ ನಿರೀಕ್ಷೆಯಿದೆ. ಅಕ್ಟೋಬರ್ 8 ರ ಮಧ್ಯಾಹ್ನದಿಂದ 9 ರ ಮಧ್ಯಾಹ್ನದವರೆಗೆ ಜಿಲ್ಲೆಗೆ ಅಧಿಕ ಸಂಖ್ಯೆಯಲ್ಲಿ ಜನತೆ ಭೇಟಿ ನೀಡುವರು. ಅಕ್ಟೋಬರ್ 7 ರಿಂದ 9 ರವರೆಗೆ ಮಡಿಕೇರಿ, 8 ರಂದು ಗೋಣಿಕೊಪ್ಪದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮಡಿಕೇರಿಯಲ್ಲಿ 40 ಮತ್ತು ಗೋಣಿಕೊಪ್ಪದಲ್ಲಿ 15 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದರು.
ಇನ್ನು ಅಕ್ಟೋಬರ್ 8 ರ ಮಧ್ಯಾಹ್ನದಿಂದ 9 ರ ಮಧ್ಯಾಹ್ನದವರೆಗೆ ನಗರದೊಳಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ವಾಹನಗಳಿಗೆ ಪಟ್ಟಣದ ಮ್ಯಾನ್ಸ್ ಕಾಂಪೌಂಡ್, ಆರ್‌ಎಂಸಿ, ಶಾಂತಿಚರ್ಚ್, ಸಂತ ಜೋಸೆಫರ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮೈಸೂರು - ಮಂಗಳೂರು ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಿದ್ದೇವೆ ಎಂದು ತಿಳಿಸಿದರು.