ಕೊಡಗು: ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರನ್ನು ವಂಚಿಸಿದ್ದ ಆನ್‌ಲೈನ್ ವಂಚಕರ ತಂಡವೊಂದನ್ನು ಬಂಧಿಸುವಲ್ಲಿ ಸಿಸಿಬಿ (ಅಪರಾಧ ಪತ್ತೆ ದಳ) ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಡಿ.ಪನ್ನೇಕರ್, ಹಣ ದುಪ್ಪಟ್ಟು ಮಾಡಿ ಕೊಡುವುದಾಗಿ ಸಾರ್ವಜನಿಕರಿಗೆ ಆಮಿಷವೊಡ್ಡಿ ಅವರಿಂದ ಹಣ ಹೂಡಿಕೆ ಮಾಡಿಸಿದ್ದ ಬೆಂಗಳೂರಿನ ಅನಧಿಕೃತ Capitalraitiin.in ಎನ್ನುವ ವೆಬ್ ಸೈಟ್‌ನಲ್ಲಿ ಮೋಸ ಮಾಡಿದ್ದ ಕುಶಾಲನಗರದ ಮೂಲದ ಎ.ಜಾನ್ (45), ಶಶಿಕಾಂತ್ (37) ಹಾಗೂ (39) ಆಂಟೋನಿ ಎನ್ನುವ ಮೂವರನ್ನು ಬಂಧಿಸಿದ್ದು, ತಂಡದ 5 ಮಂದಿ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಸಾವಿರಾರು ಸಾರ್ವಜನಿಕರು ಈ ವಂಚಕರ ಆನ್‌ಲೈನ್ ಜಾಲಕ್ಕೆ ಮೋಸ ಹೋಗಿದ್ದಾರೆ. ಸಾಕಷ್ಟು ಜನರು ಕೋಟ್ಯಾಂತರ ಹಣವನ್ನು ಕಳೆದುಕೊಂಡಿದ್ದಾರೆ. ಆರೋಪಿ ಶಶಿಕಂತಾ ಅಡ್ಮಿನ್ ಆಗಿ ಕೆಲಸ ಮಾಡುತ್ತಿದ್ದ. ಹಣ ತೊಡಗಿಸುವ ಮೊದಲು ಶಶಿಕಾಂತ್‌ನನ್ನು ಸಂಪರ್ಕಿಸಿ ಯೂಸರ್ ಐಡಿ ಹಾಗೂ ಪಾಸ್ ವರ್ಡ್‌ನೊಂದಿಗೆ ಒಂದು ಇ-ಪಿನ್‌ಗೆ 1000 ರೂ. ಪಾವತಿಸಬೇಕು. ಸೈಟ್‌ಗೆ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ ಒಂದು ಯೂಸರ್ ಐಡಿ ಪಡೆಯಲು 3000 ರೂ. ಹಣ ತೊಡಗಿಸಬೇಕು. ಪ್ರತಿನಿತ್ಯ ಒಂದು ಯೂಸರ್ ಐಡಿಯಿಂದ ಮೂರು ಇ-ಪಿನ್ ಮಾತ್ರ ಬಳಸಬಹುದು. ಹಣ ಹೂಡಿಕೆಗೆ ಲಾಗಿನ್ ಆದ ಕೂಡಲೇ ತಾವು ಹೂಡಿಕೆ ಮಾಡುತ್ತಿರುವ 3000 ಹಣ ಯಾರ ಖಾತೆಗೆ ವರ್ಗಾವಣೆ ಆಗಬೇಕೆಂದು ಮಾನೀಟರ್‌ನಲ್ಲಿ ತೋರಿಸಲಾಗುತ್ತಿತ್ತು. ಹಣವನ್ನು ಗೂಗಲ್ ಪೇ, ಪೋನ್ ಪೇ ಅಥವಾ ನೆಟ್ ಬ್ಯಾಂಕಿಂಗ್‌ನಲ್ಲಿ ಹಣ ಹಾಕುವುದಾಗಿ ತಿಳಿಸಿ, ಹಣ ಸಂದಾಯದ ರಶೀದಿಯನ್ನು ಅಪ್‌ಲೋಡ್ ಮಾಡಿ ಹೀಗೆ ಒಂದು ವ್ಯವಸ್ಥಿತವಾದ ಆನ್ ಲೈನ್ ಮೂಲಕ ವಂಚಿಸುತ್ತಿದ್ದರು ಎಂದರು.
ಇದೇ ರೀತಿ helpingplanate.in, kinghelping.in, justmoney.in, crowdfunging.in, caringclub.in, infiniteclub.in ನಂತಹ ಸಾಕಷ್ಟು ಆನ್ ಲೈನ್ ವಂಚನೆ ಪ್ರಕರಣಗಳು ರಾಜ್ಯದಾದ್ಯಂತ ಸಕ್ರಿಯವಾಗಿದ್ದು, ಜಿಲ್ಲೆಯ ಜನತೆ ಎಚ್ವರಿಕೆಯಿಂದ ಇರಬೇಕು ಎಂದು ಕಿವಿ ಮಾತು ಹೇಳಿದರು.