ಕೊಡಗು (ಭಾಗಮಂಡಲ): ನಾಳೆ ಬೆಳಗ್ಗೆ ಕಾವೇರಿ ತೀರ್ಥೋದ್ಭವ ಹಿನ್ನೆಲೆ ತಲಕಾವೇರಿಗೆ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಸತ್ಸಂಪ್ರದಾಯಕ್ಕೆ ಅಪಚಾರವಾಗದಂತೆ ಎಲ್ಲಾ ನಡೆಯಲಿವೆ. ನಾವು ಕಾವೇರಿ ಭಕ್ತರನ್ನು ದೂರ ಇಟ್ಟಿಲ್ಲ. ಕೋವಿಡ್ ಹಿನ್ನೆಲೆ ನೂಕುನುಗ್ಗಲು ಆಗದಂತೆ ಕ್ರಮ ವಹಿಸಿದ್ದೇವೆ. ತೀರ್ಥೋದ್ಭವದ ಬಳಿಕ ಜನರು ತೀರ್ಥ ಪಡೆದು ಹೋಗಬಹುದು. ಆದರೆ, ಕೊಳಕ್ಕೆ ಯಾರು ಇಳಿಯುವಂತಿಲ್ಲ. ಇದು ಎಲ್ಲರ ಹಿತದೃಷ್ಟಿಯಿಂದ ಮಾಡಿರುವ ನಿಯಮ ಎಂದು ಎಚ್ಚರಿಸಿದರು.
ಕಲ್ಯಾಣ ಕರ್ನಾಟಕದಲ್ಲಿ ಪ್ರವಾಹ ಬಂದರೂ ಸಚಿವರು ಹೋಗಿಲ್ಲ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಸೋಮಣ್ಣ, ಸರ್ಕಾರ ಸಂತ್ರಸ್ತರ ನೋವಿನಲ್ಲಿ ಭಾಗಿಯಾಗಿದೆ. ಕಂದಾಯ ಸಚಿವ ಆರ್.ಅಶೋಕ್ ನೆರೆ ಪೀಡಿತ ಪ್ರದೇಶಗಳಿಗೆ ತೆರಳಿದ್ದಾರೆ. ಗೋವಿಂದ ಕಾರಜೋಳ ಅವರಿಗೆ ಕೋವಿಡ್ ಬಂದಿತ್ತು. ಈಗಷ್ಟೇ ಅದರಿಂದ ಹೊರ ಬಂದಿದ್ದಾರೆ. ಸಂತ್ರಸ್ತರ ನೆರವಿಗೆ ಸರ್ಕಾರ ಸಂಪೂರ್ಣ ನೆರವಿನ ಕೆಲಸವನ್ನು ಮಾಡುತ್ತಿದೆ ಎಂದರು.