ಮಡಿಕೇರಿ: ಜಲ ಪ್ರಳಯದಿಂದ ಕೊಡಗು ತತ್ತರಗೊಂಡಿತ್ತು. ಬೆಟ್ಟ-ಗುಡ್ಡ ಕುಸಿದು ಮನೆಗಳು, ಸೇತುವೆ, ರಸ್ತೆ ಗಳು ನೀರಿನಲ್ಲಿ ಕೊಚ್ಚಿ ಹೋಗಿತ್ತು. ಹಂತ ಹಂತವಾಗಿ ಜಿಲ್ಲಾಡಳಿತ ಕೆಲ ಬ್ರಿಡ್ಜ್ ಸೇರಿದಂತೆ ಹಾನಿಗೊಂಡವನ್ನು ಸರಿ ಮಾಡಿದೆ. ಆದ್ರೆ ಪ್ರಸಿದ್ದ ಪ್ರವಾಸಿ ತಾಣ ಅಬ್ಬಿ ಜಲಪಾತದ ಬ್ರಿಟಿಷ್ ಕಾಲದ ಕಬ್ಬಿಣ ಸೇತುವೆಯನ್ನು ರಿಪೇರಿ ಮಾಡದಿರುವುದು ಪ್ರವಾಸಿರ ಆಕ್ರೋಶಕ್ಕೆ ಕಾರಣವಾಗಿದೆ.
ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದಲ್ಲಿರುವ ಅಬ್ಬಿ ಜಲಪಾತ ಹಚ್ಚ ಹಸಿರಿನ ಕಾನನದ ನಡುವೆ ಧುಮ್ಮಿಕಿ ಹರಿಯುತ್ತಿದೆ. ಇದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದ್ರೆ ಅಬ್ಬಿ ಜಲಪಾತದ ಸೇತುವೆ ಮಾತ್ರ ಇನ್ನೂ ರಿಪೇರಿಯಾಗದಿರುವುದು ಪ್ರವಾಸಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಬ್ರಿಟಿಷರು ನಿರ್ಮಿಸಿದ್ದ ಸೇತುವೆ:
ಅಬ್ಬಿ ಜಲಪಾತವನ್ನು ಹತ್ತಿರದಿಂದ ನೋಡಲು ಬ್ರಿಟಿಷರು ಕಬ್ಬಿಣದಲ್ಲಿ ಬ್ರಿಡ್ಜ್ ನಿರ್ಮಾಣ ಮಾಡಿದ್ರು. ಈ ಸೇತುವೆ ಮೇಲೆ ಹಲವಾರು ಸಿನಿಮಾಗಳ ಚಿತ್ರೀಕರಣವೂ ಆಗಿದೆ. ಜಲಪಾತ ನೋಡಲು ಬರುವ ಪ್ರವಾಸಿಗರು ಇಲ್ಲಿ ನಿಂತು ಫೋಟೋ ತೆಗಿಸಿಕೊಳ್ಳುತ್ತಾ ಎಂಜಾಯ್ ಮಾಡ್ತಿದ್ರು. ಆದ್ರೆ ಈ ಸೇತುವೆ ಜಲಪ್ರಳಯಕ್ಕೆ ಹಾಳಾಗಿದ್ದು, ಈವರೆಗೂ ದುರಸ್ತಿ ಆಗಿಲ್ಲ.
ಸರ್ಕಾರ, ಅಧಿಕಾರಿಗಳಿಗೆ ಹಿಡಿಶಾಪ:
ದೇಶ-ವಿದೇಶಗಳಿಂದ ಪ್ರವಾಸಿಗರು ಅಬ್ಬಿ ಜಲಪಾತ ನೋಡಲು ಬರುತ್ತಾರೆ. ಆದ್ರೆ ನೀರು ಬೀಳುವ ಹತ್ತಿರ ಹೋಗಲಾಗದೇ, ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗದೇ ಜಲಪಾತವನ್ನು ದೂರದಲ್ಲೇ ನಿಂತು ನೋಡುತ್ತಾರೆ. ಅಲ್ಲೇ ಮುರಿದು ಬಿದ್ದಿರುವ ಸೇತುವೆಯನ್ನು ನೋಡಿ ಸರ್ಕಾರ, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾ ಹೋಗುತ್ತಿದ್ದಾರೆ.
ಇದನ್ನೂ ಓದಿ: 11ನೇ ಪುನೀತ್ ಪುಣ್ಯಸ್ಮರಣೆ: ಗಜೇಂದ್ರಗಡದ 40 ಅಪ್ಪು ಅಭಿಮಾನಿಗಳಿಂದ ನೇತ್ರದಾನ
ಕೊಡಗಿನಲ್ಲಿ ಸಂಭವಿಸಿದ ಜಲ ಪ್ರಳಯಕ್ಕೂ ಮೊದಲು ಅಬ್ಬಿ ಜಲಪಾತಕ್ಕೆ ಬರುವ ಪ್ರವಾಸಿಗರು ಜಲಪಾತ ನೋಡಿ ಖುಷಿಪಟ್ಟು ಹೋಗುತ್ತಿದ್ರು. ಆದ್ರೀಗ ಈ ಸೇತುವೆ ನೋಡಿ ನಿರಾಸೆಯಿಂದ ಹೋಗುತ್ತಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ದೃಷ್ಟಿಯಿಂದ ಈ ಜಲಪಾತ ಅಭಿವೃದ್ಧಿ ಆಗಬೇಕಿದ್ದು, ಅಧಿಕಾರಿಗಳು ಕಣ್ತೆರೆಯಬೇಕಿದೆ.