ಕೊಡಗು : ಲಾಕ್ ಡೌನ್ ಆದೇಶದ ನಡುವೆಯೂ ಮಡಿಕೇರಿ, ಗೋಣಿಕೊಪ್ಪ, ಸೋಮವಾರಪೇಟೆ, ಸಿದ್ಧಾಪುರ ಹಾಗೂ ಶನಿವಾರಸಂತೆ ಭಾಗದಲ್ಲಿ ಜನತೆ ಅಗತ್ಯ ವಸ್ತುಗಳ ಖರೀದಿಸಲು ಗುಂಪು ಗುಂಪಾಗಿ ಸೇರಿರುವ ಘಟನೆ ನಡೆದಿದೆ.
ಕೊರೊನಾ ಹರಡದಂತೆ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಅಗತ್ಯ ವಸ್ತುಗಳ ಖರೀದಿಗೆ ಸಮಯ ಗೊತ್ತುಪಡಿಸಿದ್ದರೂ ಕೂಡ ಜನ ವಸ್ತುಸ್ಥಿತಿ ಗಂಭೀರತೆ ಅರಿಯದೆ ಕೊಳ್ಳಲು ಮುಗಿಬಿದ್ದಿದ್ದಾರೆ.
ಹಲವರು ಮಾಸ್ಕ್ ಧರಿಸದೇ ಅಂಗಡಿ-ಮುಂಗಟ್ಟುಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದ ಘಟನೆಗಳು ಕಂಡು ಬಂದವು. ಜಿಲ್ಲಾಡಳಿತ ಮಡಿಕೇರಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮತ್ತು ಎಪಿಎಂಸಿ ಮಾರುಕಟ್ಟೆ ಯಾರ್ಡ್‌ನಲ್ಲಿ ಅಗತ್ಯ ವಸ್ತುಗಳ ಖರೀಗೆ ಸ್ಥಳ ಗೊತ್ತುಪಡಿಸಿದ್ದರೂ ಬಸ್ ನಿಲ್ದಾಣದಲ್ಲಿ ಮುಂಜಾನೆ ಕೇವಲ ಒಬ್ಬರು ಮಾತ್ರ ತರಕಾರಿ ಮಾರುತ್ತಿದ್ದು ಮಾರುದ್ದ ಸಾಲು ಕಂಡು ಬಂದಿತು. ಮಾರ್ಕೇಟ್, ಹಾಪ್‌ಕಾಮ್ಸ್ ಸೇರಿದಂತೆ ತರಕಾರಿ ಅಂಗಡಿಗಳ ಮುಂದೆ ಎಂದಿಗಿಂತಲೂ ಹೆಚ್ಚಿನ ಜನದಟ್ಟಣೆ ಕಂಡು ಬಂದಿತು.