ಮಡಿಕೇರಿ: ಕಾವೇರಿ ತವರು ಕೊಡಗಿನಲ್ಲಿ ಉತ್ತಮವಾಗಿ ಮಳೆಬಿದ್ರೆ ಮಾತ್ರ ಕಾವೇರಿ ಒಡಲು ಸುಭೀಕ್ಷವಾಗಿರುತ್ತೆ. ಆದರೆ, ಕಾವೇರಿ ಉಗಮಸ್ಥಾನ ಜಿಲ್ಲೆಯಲ್ಲಿ ಮಾತ್ರ ಮಳೆ ಅಂದ್ರೆ ಭಯಪಡುವ ಸ್ಥಿತಿಗೆ ತಲುಪಿದೆ. ಹೀಗಾಗಿ, ಮಳೆಯಿಂದ ಯಾವುದೇ ತೊಂದರೆಯಾಗದಂತೆ ವರುಣದೇವನಿಗೆ ಸ್ಥಳೀಯರು ತ್ರಿವೇಣಿ ಸಂಗಮ ಭಾಗಮಂಡಲದಲ್ಲಿ ಪುಲಿಕಾನ ಉತ್ಸವ ಮೂಲಕ ಶಾಂತಿ ಪೂಜೆ ಮಾಡಿ, ದೇವರೇ ನಮ್ಮನ್ನು ಕಾಪಾಡು ಎಂದು ಪ್ರಾರ್ಥಿಸಿದ್ದಾರೆ.
ಕೊಡಗಿನಲ್ಲಿ ಪ್ರತಿವರ್ಷ ಮಳೆಯಿಂದ ಅನಾಹುತಗಳು ಸಂಭವಿಸುತ್ತವೆ. ಈ ನಿಟ್ಟಿನಲ್ಲಿ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಭಾಗಮಂಡಲದ ಭಗಂಢೇಶ್ವರನಿಗೆ ಉತ್ಸವದ ಶಾಂತಿ ಪೂಜೆ ಮಾಡಲಾಗಿದೆ. ಮಳೆಯಿಂದಾಗಿ ಅತಿವೃಷ್ಠಿ, ಅನಾವೃಷ್ಠಿ ಸಂಭವಿಸದಂತೆ ಇಲ್ಲಿನ ಜನರು ಪೂಜೆ ಸಲ್ಲಿಸುತ್ತಾರೆ. ಅದೇ ರೀತಿ ಈ ವರ್ಷವೂ ಸಾಂಪ್ರದಾಯಕ ವಿಧಿ - ವಿಧಾನಗಳೊಂದಿಗೆ ಭಾಗಮಂಡಲ ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಅಮಾವಾಸ್ಯೆಯಂದು ಪೊಲಿಂಕಾನ ಅರ್ಪಣೆ: ದೇವಾಲಯದ ಅರ್ಚಕರಾದ ರವಿ ಭಟ್ ಹಾಗೂ ಹರೀಶ್ ಭಟ್ ಅವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿ -ವಿಧಾನಗಳು ನಡೆದವು. ಕಳೆದ ವರ್ಷದಂತೆ ಈ ವರ್ಷವೂ ಕೂಡ ಸರಳ ಹಾಗೂ ಸಂಪ್ರದಾಯದಂತೆ ಪೂಜೆ ನೆರವೇರಿತ್ತು. ಪ್ರತಿವರ್ಷ ಮಳೆ ಸುರಿದು ತ್ರಿವೇಣಿ ಸಂಗಮ ಭರ್ತಿಯಾದ ನಂತರದ ಅಮಾವಾಸ್ಯೆ ಎಂದು ಪೊಲಿಂಕಾನ ಅಥವಾ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯುತ್ತೆ.
ಪ್ರಕೃತಿ ವಿಕೋಪ ಸಂಭವಿಸದಂತೆ ಪ್ರಾರ್ಥನೆ: ವಾಡಿಕೆ ಮಳೆ ಬಂದು ಕಾವೇರಿ ಜಲಾನಯನ ಭಾಗದ ರೈತರ ಬದುಕು ಹಸನಾಗಬೇಕು. ಜೀವನಾಡಿ ಕಾವೇರಿ ಭರ್ತಿಯಾಗಬೇಕು ಅನ್ನೋ ಉದ್ದೇಶದಿಂದ ಈ ಒಂದು ಉತ್ಸವವನ್ನ ಆಚರಿಸಲಾಗುತ್ತದೆ. ಈ ಭಾರಿಯೂ ಕೊಡಗಿನ ಪ್ರಸಿದ್ಧ ಪುಣ್ಯಕ್ಷೇತ್ರ ಭಾಗಮಂಡಲದ ಭಗಂಡೇಶ್ವರನ ಸನ್ನಿಧಿಯಲ್ಲಿ ಯಶಸ್ವಿಯಾಗಿ ಪೊಲಿಂಕಾನ ಉತ್ಸವವನ್ನ ನಡೆಸಲಾಯಿತು. ಹೆಚ್ಚು ಮಳೆಯಾಗಿ ಕಳೆದ ಬಾರಿಯಂತೆ ಯಾವುದೇ ಪ್ರಕೃತಿ ವಿಕೋಪ ಸಂಭವಿಸದೇ ಇರಲಿ ಅಂತಾ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಇನ್ನು ಭಗಂಡೇಶ್ವರ ದೇವಾಲಯದಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜಾ ಕೈಂಕರ್ಯ ನೆರವೇರಿದ್ದು, ಪೂಜೆನಂತರ ಬಾಳೆಕಂಬದಿಂದ ವಿಶೇಷವಾಗಿ ಸಿದ್ದಗೊಳಿಸಿದ ಉತ್ಸವಮಂಟಪದಲ್ಲಿ ಮುತ್ತೈದೆಯರಿಗೆ ನೀಡೋ ಬಳೆ, ಲ. ಬಿಚ್ಚೋಲೆ, ಅರಿಶಿಣ ಕುಂಕುಮ, ಸೀರೆ, ಕರಿಮಣಿ ಮುಂತಾದವನ್ನು ಇಟ್ಟು ತ್ರಿವೇಣಿ ಸಂಗಮದಲ್ಲಿ ಕಾವೇರಿಮಾತೆಗೆ ಅರ್ಪಣೆ ಮಾಡಲಾಯಿತು.
ಅನಾದಿಕಾಲದಿಂದಲೂ ಈ ಉತ್ಸವ ಆಚರಣೆ: ಅಲ್ಲದೇ ಇದೇ ಮಂಟಪಕ್ಕೆ ಚಿನ್ನ ಹಾಗೂ ಬೆಳ್ಳಿಯನ್ನೂ ತೊಟ್ಟಿಲಲ್ಲಿ ಹಾಕಿ ನೀರಿನಲ್ಲಿ ಬಿಡಲಾಗುತ್ತದೆ. ಉತ್ತಮ ಮಳೆ ಸುರಿಸಿ ಕೃಷಿ ಚಟುವಟಿಕೆ ಸುಭೀಕ್ಷೆಯಾಗಿ ನಡೆಯಲು ಅನುವುಮಾಡಿಕೊಡಲು ಕಾವೇರಿಗೆ ವಂದಿಸೋದು, ಮಳೆಯ ರೌದ್ರವತಾರ ಕಡಿಮೆಯಾಗಿ ಕಾವೇರಿ ಶಾಂತಳಾಗಲಿ ಎಂಬ ಉದ್ದೇಶದಿಂದ ಅನಾದಿಕಾಲದಿಂದಲೂ ಈ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಉತ್ಸವದ ಪ್ರಮುಖ ಪೂಜೆಯ ಉದ್ದೇಶ: ಭಾಗಮಂಡಲ ಭಗಂಡೇಶ್ವರ ದೇವಾಲಯದಲ್ಲಿ ಮಹಾಪೂಜೆ ಬಳಿಕ ರೈತರ ಅನುಕೂಲಕ್ಕೆ ತಕ್ಕಂತೆ ಮಳೆ ಬಂದು ನಾಡಿನ ಜನತೆಗೆ ಒಳಿತಾಗಲೆಂದು ಈ ಸಂದರ್ಭದಲ್ಲಿ ಪ್ರಾರ್ಥನೆ ಮಾಡಲಾಯಿತು. ಜೊತೆಗೆ ಮುಂದೆ ಪ್ರವಾಹ ಬಾರದಂತೆ ಬೇಡೋದು ಈ ಉತ್ಸವದ ಪ್ರಮುಖ ಉದ್ದೇಶ. ಈ ಒಂದು ಉತ್ಸವಕ್ಕೆ ಕೊಡಗು ಮಾತ್ರವಲ್ಲ ನೆರೆಯ ರಾಜ್ಯಗಳಿಂದಲೂ ಭಕ್ತರು ಬಂದು ವಿಶೇಷ ಪೂಜೆಯನ್ನ ಕಣ್ತುಂಬಿಕೊಳ್ಳುತ್ತಾರೆ.
ಒಟ್ಟಿನಲ್ಲಿ ಕಾವೇರಿ ಉಗಮಸ್ಥಾನದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ನೀರಿನ ಸಮಸ್ಯೆ ಎದುರಾಗಿಲ್ಲ. ಭಗಂಡೇಶ್ವರನಿಗೆ ಪೂಜೆ ಸಲ್ಲಿಸಿದರೆ ಮಳೆಯಿಂದಾಗುವ ಅಸಮತೋಲನಗಳು ಸರಿಯಾಗುತ್ತವೆ. ಕೇಳಿದ ವರಗಳನ್ನು ಈ ದೇವರು ಕೊಡುತ್ತಾನೆ ಎಂಬುವುದು ಇಲ್ಲಿನ ಜನರ ನಂಬಿಕೆಯಾಗಿದ್ದು, ಹಿಂದಿನಿಂದಲೂ ಈ ಆಚರಣೆಯನ್ನ ಬಿಡದೇ ನಡೆಸುತ್ತಿದ್ದಾರೆ.
ಓದಿ: ದ.ಕನ್ನಡದ ಸರಣಿ ಹತ್ಯೆಗಳಿಗೂ, ಸಂಘ ಪರಿವಾರದ ಆಂತರಿಕ ಬಿಕ್ಕಟ್ಟಿಗೂ ಸಂಬಂಧ ಇದೆ: ಸಿದ್ದರಾಮಯ್ಯ