ಕೊಡಗು(ತಲಕಾವೇರಿ): ಕೊಡಗಿನ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತದಲ್ಲಿ ನಾಪತ್ತೆಯಾಗಿರುವ ನಾಲ್ವರಿಗಾಗಿ ನಮ್ಮ ಮನಸ್ಸಿಗೆ ತೃಪ್ತಿ ಆಗುವವರೆಗೆ ಕಾರ್ಯಾಚರಣೆ ಮಾಡುತ್ತೇವೆ ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ಗುಡ್ಡ ಕುಸಿದಿರುವ ರಭಸಕ್ಕೆ ಮನೆಯ ಫೌಂಡೇಷನ್ ಕಲ್ಲುಗಳೇ ಸ್ಥಳದಿಂದ 250 ಅಡಿ ದೂರಕ್ಕೆ ಹಾರಿಹೋಗಿವೆ. ಇನ್ನು ಮನೆಯಲ್ಲಿದ್ದ ವಸ್ತುಗಳು 2 ಕಿಲೋ ಮೀಟರ್ ದೂರದವರೆಗೆ ಹೋಗಿ ಬಿದ್ದಿವೆ. ಹೀಗಾಗಿ ಕಣ್ಮರೆಯಾಗಿರುವವರ ದೇಹಗಳು ಮನೆ ಇದ್ದ ಸ್ಥಳದಿಂದ ಹತ್ತಿರ ಇರಲು ಸಾಧ್ಯವಿಲ್ಲ ಎಂದು ಊಹಿಸಲಾಗಿದೆ ಎಂದರು.
ಆನಂದತೀರ್ಥರ ಮೃತದೇಹ ಸಿಕ್ಕಿದ ಕಡೆ ಅಂದರೆ ಭೂಕುಸಿತದ ಎಡಭಾಗದಲ್ಲಿ ಇವರ ದೇಹಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಭೂಕುಸಿತವಾಗಿರುವ ಕೆಳಭಾಗದಲ್ಲಿ ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದೆ. ಇಂದಿನಿಂದ ಎಸ್ಡಿಆರ್ಎಫ್, ಎನ್ಡಿಆರ್ಎಫ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ ಎಂದು ತಿಳಿಸಿದರು.
ಸದ್ಯ ಮಳೆ ಕಡಿಮೆ ಇದ್ದು, ಸ್ಥಿತಿ ಹೀಗೆ ಇದ್ದರೆ ಕಾರ್ಯಾಚರಣೆಗೆ ಅನುಕೂಲವಾಗಲಿದೆ. ಒಂದು ವೇಳೆ ಮಳೆ ತೀವ್ರಗೊಂಡಲ್ಲಿ ಕಾರ್ಯಾಚರಣೆ ಕಷ್ಟವಾಗಲಿದೆ ಎಂದರು.