ಕೊಡಗು : ದುಬಾರೆ ಆನೆ ಶಿಬಿರದ ಕ್ಯಾಂಪಿನಲ್ಲಿ ಎಲ್ಲರ ಫೆವರೇಟ್ ಆಗಿದ್ದ ಕುಶ ಆನೆ ನಾಪತ್ತೆಯಾಗಿ ಒಂದು ವರ್ಷ ಕಳೆದಿದ್ರೂ ಈವರೆಗೆ ತಿರುಗಿ ಬಂದಿಲ್ಲ. ಕುಶನನ್ನು ಕರೆತರಲು ತೆರಳಿದ್ದ ಅಧಿಕಾರಿಗಳು ಕೂಡ ಬರಿಗೈಯಲ್ಲಿ ಮರಳಿದ್ದಾರೆ.
ಎರಡು ವರ್ಷಗಳ ಹಿಂದೆ ಸುಂಟಿಕೊಪ್ಪ ಸಮೀಪ ಸೆರೆ ಹಿಡಿಯಲಾಗಿದ್ದ ಈ ಆನೆಯನ್ನು ದುಬಾರೆಯಲ್ಲೇ ಪಳಗಿಸಿ ಕುಶ ಎಂದು ನಾಮಕರಣ ಮಾಡಲಾಗಿತ್ತು. ಆತನೂ ಶಿಬಿರದ ಉಳಿದ ಆನೆಗಳೊಂದಿಗೆ ಚೆನ್ನಾಗಿಯೇ ಹೊಂದಿಕೊಂಡಿದ್ದ.
ಆದ್ರೆ, ಇದ್ದಕ್ಕಿದ್ದಂತೆ ಮದವೇರಿ, ಸರಪಳಿ ತುಂಡರಿಸಿಕೊಂಡು ಸಂಗಾತಿ ಅರಸಿ ಕಾಡು ಹತ್ತಿಬಿಟ್ಟಿದ್ದ. ಅಂದಿನಿಂದ ಈವರೆಗೆ ಕುಶ ಶಿಬಿರಕ್ಕೆ ಮರಳಿಲ್ಲ. ಅಲ್ಲೊಮ್ಮೆ ಇಲ್ಲೊಮ್ಮೆ ಕಾಣ ಸಿಕ್ಕರೂ ಮನುಷ್ಯರ ಧ್ವನಿ ಕೇಳುತ್ತಿದ್ದಂತೆ ಅಲ್ಲಿಂದ ಎಸ್ಕೇಪ್ ಆಗುತ್ತಾನಂತೆ.
ಒಂದೆಡೆ ಅರಣ್ಯ ಇಲಾಖೆ ಸಿಬ್ಬಂದಿ ಕುಶನ ಹುಡುಕಾಟಕ್ಕೆ ಇನ್ನಿಲ್ಲದ ಪ್ರಯತ್ನ ನಡೆಸ್ತಿದೆ. ಆದ್ರೂ ಕೂಡ ಕುಶ ಮಾತ್ರ ಕಾಡು ಬಿಟ್ಟು ಆನೆ ಶಿಬಿರಕ್ಕೆ ಬರ್ತಿಲ್ಲ. ಈ ಆನೆ ಮತ್ತೆ ಎಲ್ಲಿ ಮನುಷ್ಯರ ಮೇಲೆ ದಾಳಿ ಮಾಡುತ್ತೋ ಅನ್ನೋ ಆತಂಕ ಕಾಡಂಚಿನ ಗ್ರಾಮಸ್ಥರಲ್ಲಿದೆ.
ಎರಡು ವರ್ಷಗಳ ಹಿಂದೆ ಕುಶನನ್ನು ಕಾಡಿನಲ್ಲಿ ಸೆರೆ ಹಿಡಿಯಲು ಲಕ್ಷಾಂತರ ರೂ. ವೆಚ್ಚವಾಗಿದೆ. ಇದೀಗ ಈ ಆನೆ ಮತ್ತೆ ಕಾಡು ಸೇರಿರೋದು ಸರ್ಕಾರದ ದುಡ್ಡನ್ನ ಪೋಲು ಮಾಡಿದಂತಾಗಿದೆ. ಆನೆ ತಪ್ಪಿಸಿಕೊಂಡ ಒಂದು ತಿಂಗಳಲ್ಲೇ ಗಂಭೀರವಾಗಿ ಪ್ರಯತ್ನಿಸಿದ್ದರೆ ಕುಶನನ್ನ ಮತ್ತೆ ಸುಲಭವಾಗಿ ಕಾಡಿನಿಂದ ತರಬಹುದಾಗಿತ್ತು.
ಆದ್ರೆ, ಇದೀಗ ವರ್ಷ ಕಳೆದಿರೋದ್ರಿಂದ ಅದು ಮತ್ತೆ ಕಾಡಾನೆಯಾಗಿಯೇ ಬದಲಾಗಿರುತ್ತದೆ. ಹಾಗಾಗಿ, ಅದನ್ನು ಹಿಡಿಯುವುದು ಅಂದರೆ ಅಷ್ಟು ಸುಲಭವಿಲ್ಲ. ಮತ್ತೆ ಕಾಡಾನೆ ಸೆರೆ ಹಿಡಿದಂತೆಯೇ ಹಿಡಿದು ಶಿಬಿರದಲ್ಲಿ ಹಲವು ತಿಂಗಳು ಪಳಗಿಸಬೇಕಾಗುತ್ತದೆ. ಇದಕ್ಕೆಲ್ಲ ಮತ್ತೆ ಲಕ್ಷಾಂತರ ರೂ. ವೆಚ್ಚವಾಗುತ್ತದೆ ಎಂಬುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ .. ಬೈ ಎಲೆಕ್ಷನ್: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ