ಸೋಮವಾರಪೇಟೆ (ಕೊಡಗು): ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಮಳೆ ಸೃಷ್ಠಿಸುತ್ತಿರುವ ಅವಾಂತರ ಅಷ್ಟಿಷ್ಟಲ್ಲ. ಹಿಂದಿನಿಂದಲೂ ಹೊಳೆ ಸಮೀಪವೇ ಮನೆಗಳನ್ನು ಕಟ್ಟಿಕೊಂಡು ಬದುಕು ಸಾಗಿಸುತ್ತಿರುವ ಹಲವರಿಗೆ ಮೂರು ವರ್ಷಗಳಿಂದ ಪ್ರವಾಹದ ರೀತಿಯಲ್ಲಿ ನದಿ ನೀರು ಹರಿಯುತ್ತಿರುವುದು ಆತಂಕವನ್ನು ಉಂಟುಮಾಡುತ್ತಿದೆ. ಭಾರೀ ಪ್ರಮಾಣದ ಪ್ರವಾಹ ಬಂದು ಮನೆಗಳು ಕೊಚ್ಚಿಹೋಗಿ ಎರಡು ವರ್ಷಗಳೇ ಕಳೆದರೂ ಈ ಕುಟುಂಬಗಳಿಗೆ ಇಂದಿಗೂ ಪರಿಹಾರ ಮರಿಚಿಕೆಯಾಗಿದೆ. ಮಳೆ ಬಂತೆಂದರೆ ಜೀವ ಕೈಯಲ್ಲಿ ಹಿಡಿದು ಬದುಕಬೇಕಾದ ಸ್ಥಿತಿ ಎದುರಾಗಿದೆ.
2018 ರ ಆಗಸ್ಟ್ ತಿಂಗಳಲ್ಲಿ ಸುರಿದಿದ್ದ ಭಾರೀ ಮಳೆಯಿಂದ ಸೂರ್ಲಬ್ಬಿ ಬೆಟ್ಟಗಳಿಂದ ಭಾರೀ ನೀರು ನುಗ್ಗಿ ನಂದಿಮೊಟ್ಟೆ ಹೊಳೆಯಲ್ಲಿ ಪ್ರವಾಹ ಸೃಷ್ಟಿಯಾಗಿತ್ತು. ಈ ವೇಳೆ ಕಿರುದಾಲೆಯ 10 ಕುಟುಂಬಗಳ ಮನೆಗಳು ಹಿಂಬದಿಯಲ್ಲಿ ತಳಪಾಯದ ಸಮೇತ ಸಂಪೂರ್ಣ ಕೊಚ್ಚಿಹೋಗಿದ್ದವು. ಈ ಸ್ಥಿತಿ ನಿರ್ಮಾಣವಾಗಿ ಎರಡು ವರ್ಷಗಳೇ ಕಳೆದಿದ್ದರೂ ಈ ಕುಟುಂಬಗಳಿಗೆ ನಯಾಪೈಸೆ ಪರಿಹಾರ ಸಿಕ್ಕಿಲ್ಲ.
2019 ಮತ್ತು 2020 ರ ಎರಡು ವರ್ಷಗಳ ಆಗಸ್ಟ್ ತಿಂಗಳಲ್ಲೂ ಪ್ರವಾಹ ಎದುರಾಗಿತ್ತು. ಇಷ್ಟಾದರೂ ಅಧಿಕಾರಿಗಳು ಮಾತ್ರ ಈ ಕುಟುಂಬಗಳಿಗೆ ಪರ್ಯಾಯ ವಸತಿ ಇರಲಿ, ಕನಿಷ್ಠ ಪರಿಹಾರವನ್ನೂ ನೀಡಿಲ್ಲ. ಈ ಕುಟುಂಬಗಳು ಬೇರೆ ವಿಧಿಯಿಲ್ಲದೆ ಇಂದಿಗೂ ಮುರಿದು ಬಿದ್ದಿರುವ ಮನೆಯಲ್ಲೇ ಜೀವನ ಸಾಗಿಸುತ್ತಿವೆ. ಇಳಿವಯಸ್ಸಿನ ಇಬ್ರಾಹಿಂ ಎಂಬುವವರ ಮನೆ ಸಂಪೂರ್ಣ ಬಿದ್ದು ಹೋಗಿದ್ದು, ಅದೇ ಮನೆಯಲ್ಲೇ ಬದುಕು ನಡೆಸುತ್ತಿದ್ದಾರೆ.
ವೆಂಕಟೇಶ್ ಎನ್ನುವರ ಮನೆಯೂ 2018 ಪ್ರವಾಹದಲ್ಲಿ ಕೊಚ್ಚಿಹೋಗಿದ್ದು, ಅದೇ ಮನೆಯಲ್ಲೇ ಬದುಕು ದೂಡುತ್ತಿದ್ದಾರೆ. ಅದೇ ವರ್ಷದ ಪ್ರವಾಹದಲ್ಲಿ ಕೆಲ ಮನೆಗಳಿಗೆ ಯಾವುದೇ ನಷ್ಟವಾಗದಿದ್ದರೂ ಅಂತ ಕುಟುಂಬಗಳಿಗೆ ಜಿಲ್ಲಾಡಳಿತ ಮನೆಗಳನ್ನು ನೀಡಿದೆ. ಇನ್ನು ಎಷ್ಟೋ ಮನೆಗಳಿಗೆ ಅಪಾಯವಿಲ್ಲದಿದ್ದರೂ ಅಪಾಯವಿದೆ ಎಂದು ತೋರಿಸಿ ಅಂತವರಿಗೆ ಮನೆಗಳನ್ನು ನೀಡಲಾಗಿದೆ. ಈಗ ಅಂತಹವರು ಸರ್ಕಾರದ ಹೊಸ ಮನೆಗಳನ್ನು ಪಡೆದುಕೊಂಡಿರುವುದಲ್ಲದೆ, ಹಳೆ ಮನೆಯಲ್ಲೂ ಇದ್ದಾರೆ. ಆದರೆ ನಿಜವಾಗಿಯೂ ಮನೆಗಳು ಕೊಚ್ಚಿಹೋಗಿದ್ದರೂ ಪರಿಹಾರ ಕೊಟ್ಟಿಲ್ಲ. ಬದಲಾಗಿ ಪ್ರತೀ ವರ್ಷ ಮಳೆಗಾಲ ಬಂದಾಗ ಅಧಿಕಾರಿಗಳು ಬಂದು ಮನೆಗಳನ್ನು ಖಾಲಿ ಮಾಡುವಂತೆ ನೋಟಿಸ್ ನೀಡುತ್ತಾರೆ. ಪರ್ಯಾಯ ವ್ಯವಸ್ಥೆ ನೀಡುವಂತೆ ಅಧಿಕಾರಿಗಳನ್ನು ಕೇಳಿದರೆ, ಹೊಳೆದಂಡೆಯಲ್ಲಿ ಮನೆ ಕಟ್ಟಿರುವುದರಿಂದ ಪರಿಹಾರ ಕೊಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಎನ್ನೋದು ಜನರ ಆರೋಪ.
ಒಟ್ಟಿನಲ್ಲಿ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡು ಎರಡು ವರ್ಷಗಳು ತುಂಬಿದರೂ ಪರ್ಯಾಯ ವಸತಿ ಇಲ್ಲದೆ ಜನರು ಕಣ್ಣೀರಿನಲ್ಲಿ ಕೈತೊಳೆಯುತ್ತಾ ಆತಂಕದಲ್ಲೇ ಬದುಕು ಕಳೆಯುತ್ತಿದ್ದಾರೆ.